
ಪುಣೆ,ಆ.೯:ಪ್ರಧಾನಿ ನರೇಂದ್ರಮೋದಿ ಹತ್ಯೆ ಸೇರಿದಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯ ನಡೆಸುವುದಾಗಿ ಮುಂಬೈನ ವ್ಯಕ್ತಿಯೊಬ್ಬರಿಗೆ ಪತ್ರ ರವಾನಿಸಲಾಗಿದೆ. ಈ ಸಂಬಂಧ ಬೆದರಿಕೆ ಪತ್ರ ಸ್ವೀಕರಿಸಿರುವ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮೀಪಿಸುತ್ತಿರುವ ಹತ್ತಿರದಲ್ಲೇ ಈ ಬೆದರಿಕೆ ಪತ್ರ ಬಂದಿರುವುದು ಆತಂಕ್ಕೆಡೆ ಮಾಡಿಕೊಟ್ಟಿದೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈ ಸೇರಿದಂತೆ ರಾಜಧಾನಿ ದೆಹಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಪುಣೆ ನಿವಾಸಿ ದೀನಾನಾಥ್ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯ, ಪ್ರಧಾನಿ ಅವರನ್ನು ಹತ್ಯೆ ಮಾಡುವುದಾಗಿ ಇ-ಮೇಲ್ ರವಾನೆಯಾಗಿದೆ. ತಕ್ಷಣ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ.
ಮೋಖಿಂ ಹೆಸರಿನಲ್ಲಿ ಈ ಇ-ಮೇಲ್ ಬೆದರಿಕೆ ಬಂದಿದೆ. ಇದು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಈ ಹಿಂದೆಯೂ ಪ್ರಧಾನಿ ನರೇಂದ್ರಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಬಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಬೆದರಿಕೆ ಪತ್ರ
ಹಲವು ಉಗ್ರಗಾಮಿ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದು, ಆ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದೇನೆ. ಕೆಲವು ಧರ್ಮಗಳ ಜನರನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದೇನೆ.ಈ ಪಟ್ಟಿಯಲ್ಲಿ ನರೇಂದ್ರಮೋದಿ ಅವರೂ ಇದ್ದಾರೆ. ದೇಶದ ಹಲವೆಡೆ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು ಎಂದು ಇ-ಮೇಲ್‌ನಲ್ಲಿ ಸಂದೇಶ ರವಾನಿಸಿದ್ದಾನೆ.