ಮೋದಿ ಹತ್ಯೆಗೆ ಸಂಚು ಇಬ್ಬರ ಸೆರೆ

ಪಾಟ್ನಾ(ಬಿಹಾರ),ಜು.೧೪- ಪ್ರಧಾನಿ ನರೇಂದ್ರಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಜಾಲವನ್ನು ಬಿಹಾರ ಪೊಲೀಸರು ಬೇಧಿಸಿ ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಉಗ್ರರನ್ನು ಬಂಧಿಸಿ ಶಸ್ತ್ರಾಸ್ತ್ರ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಭೇಟಿಯ ಸಂದರ್ಭದಲ್ಲಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಸಂಚಿನ ಸುಳಿವನ್ನು ಪತ್ತೆ ಮಾಡಿದ ಬಿಹಾರ ಪೊಲೀಸರು ಪಾಟ್ನಾದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಅವರಿಂದ ೮ ಪುಟಗಳ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಈ ಪತ್ರದಲ್ಲಿ ೨೦೪೭ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕೆಂಬ ಬಗ್ಗೆ ಬರಹ ಇದೆ. ಈ ೮ ಪುಟಗಳಲ್ಲಿ ಆಘಾತಕಾರಿ ಮಾಹಿತಿಗಳಿವೆ ಎನ್ನಲಾಗಿದೆ.
ಬಂಧಿತ ಉಗ್ರರನ್ನು ಮೊಹ್ಮದ್‌ಜಲಾವುದ್ದೀನ್ ಮತ್ತು ಅಕ್ತರ್‌ಪರ್ವೇಜ್ ಎಂದು ಗುರುತಿಸಲಾಗಿದೆ. ಬಂಧಿತ ಮೊಹ್ಮದ್‌ಜಲಾವುದ್ದೀನ್ ಜಾಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಇವರು ನಿವೃತ್ತಿ ನಂತರ ಉಗ್ರರ ಜತೆ ಸೇರಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಬಂಧಿತ ಉಗ್ರರಿಬ್ಬರಿಗೂ ಪ್ರಧಾನಿಗಳ ಬಿಹಾರ ಭೇಟಿಗೂ ಮುನ್ನ ಉಗ್ರ ಸಂಘಟನೆಯಿಂದ ಪಾಟ್ನಾದ ಪುಲ್ವಾರಿ ಶರೀಫ್ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗಿತ್ತು. ಉಗ್ರರ ಬಂಧನ ಬೆನ್ನಲ್ಲೆ ಪುಲ್ವಾರಿ ಶರೀಫ್‌ನಲ್ಲಿದ್ದ ಉಗ್ರ ಸಂಘಟನೆಯ ಕಚೇರಿ ಮೇಲೂ ಬಿಹಾರ ಪೊಲೀಸರು ದಾಳಿ ನಡೆಸಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಪೊಲೀಸರಿಗೆ ಅನೇಕ ಮಹತ್ವದ ದಾಖಲೆಗಳು ಸಿಕ್ಕಿವೆ. ಬಂಧಿತರಲ್ಲಿ ಒಬ್ಬನಾಗಿರುವ
ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹ್ಮದ್‌ಜಲಾವುದ್ದೀನ್ ಪಾಟ್ನಾದಲ್ಲಿರುವ ತನ್ನ ಮನೆಯಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳ ಮತ್ತು ಮಾರ್ಷಲ್ ಆರ್ಟ್‌ನ ತರಬೇತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.