ಮೋದಿ ಸ್ವಾಗತಕ್ಕೆ ಮಂಗಳೂರು ಕಲಾವಿದರ ನೃತ್ಯ

ಸಿಡ್ನಿ,ಮೇ.೨೩- ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಸಿಡ್ನಿಯಲ್ಲಿ ಭಾರತೀಯ ನಿವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಭಾರತ ಮೂಲದ ಆಸ್ಟ್ರೇಲಿಯನ್ನರು ಭಾರೀ ಸಿದ್ಧತೆ ನಡೆಸಿದ್ದು ಈ ವೇಳೆ ಮಂಗಳೂರು ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ನೇತೃತ್ವದ ತಂಡವು ಭರತನಾಟ್ಯ ಮತ್ತಿತರ ವಿಭಿನ್ನ ನೃತ್ಯ ಪ್ರದರ್ಶನ ನೀಡಲಿದೆ.
ಸುಮಾರು ೨೦,೦೦೦ ಕ್ಕೂ ಅಧಿಕ ಮಂದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ತಮ್ಮ ನೃತ್ಯ ಸಂಸ್ಥೆಯ ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ ಕಾಂತಾರ ಸಿನಿಮಾದ ಹಾಡಿನ ನಾಟ್ಯ ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ಹಾಗೂ ಯಕ್ಷಗಾನವನ್ನು ಅಳವಡಿಸಿ ಈ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

ಐಟಿ ಕ್ಷೇತ್ರದಲ್ಲಿ ಕೆಲಸದಲ್ಲಿರುವ ಪಲ್ಲವಿ ಭಾಗವತ್ ಸಿಡ್ನಿಯಲ್ಲಿ ನಾಟ್ಯಕ್ತಿ ಎಂಬ ಹೆಸರಿನ ಭರತನಾಟ್ಯ ನೃತ್ಯ ತರಬೇತಿ ಸಂಸ್ಥೆಯನ್ನು ಹೊಂದಿದ್ದು, ಪ್ರಧಾನಿ ಮೋದಿ ಎದುರಲ್ಲಿ ತನ್ನ ಶಿಷ್ಯ ವೃಂದದಿಂದ ಕರ್ನಾಟಕ ಮತ್ತು ಕರಾವಳಿಯ ವಿಶೇಷ ನೃತ್ಯ ಪ್ರಕಾರಗಳನ್ನು ಪ್ರದರ್ಶನ ನೀಡಲಿದ್ದಾರೆ.. ಕಾಂತಾರ ಸಿನಿಮಾದ “ವರಾಹರೂಪಂ’ ಹಾಡು, ಜನಪದ ಹಿನ್ನೆಲೆಯ ತುಳು ಆಲ್ಬಂ ಸಾಂಗ್ “ವಾ ಪೊರ್ಲುಯಾ” ಸೇರಿದಂತೆ ಕರ್ನಾಟಕದ ನಾಟ್ಯ ಯಕ್ಷಗಾನ, ಜನಪದ ಪರಂಪರೆಯನ್ನು ವಿದೇಶದ ನಾಡಿನಲ್ಲಿ ತೆರೆದಿಡಲಿದ್ದಾರೆ.

ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಟಾನೀಸ್ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದು, ಆನಂತರ ಭಾರತೀಯ ನಿವಾಸಿಗಳೊಂದಿಗೆ ಕಾರ್ಯಕ್ರಮ ಏರ್ಪಾಡಾಗಿದೆ.

ಪಲ್ಲವಿ ಭಾಗವತ್ ಅವರು ಈ ಹಿಂದೆ ನಾಟ್ಯನಿಲಯಂ ಮಂಜೇಶ್ವರ್ ಮತ್ತು ಕರ್ನಾಟಕ ಕಲಾವಿದುಷಿ ಕಮಲಾ ಭಟ್ ಅವರಿಂದ ಭರತನಾಟ್ಯ ಕಲಿತು ವಿದ್ವತ್ ಪೂರೈಸಿದ್ದು, ಐಟಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಈ ವೇಳೆ, ಸಿಡ್ನಿಯಲ್ಲಿ ತನ್ನ ವೃತ್ತಿಯ ಜೊತೆಗೆ ತನ್ನದೇ ಆದ ನಾಟ್ಯ ತಂಡವನ್ನೂ ಕಟ್ಟಿಕೊಂಡಿದ್ದಾರೆ. ಮಂಗಳೂರಿನ ಬಿಜೈ ಕಾಪಿಕಾಡ್ ಮೂಲದ ಅನಿಶಾ ಪೂಜಾರಿ ಅವರೂ ಇದೇ ನಾಟ್ಯಕ್ತಿ ತಂಡದಲ್ಲಿದ್ದು, ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಅನಿಷಾ ಸಹ ಕಳೆದ ಆರು ವರ್ಷಗಳಿಂದ ಸಿಡ್ನಿಯಲ್ಲಿ ನೆಲೆಸಿದ್ದಾರೆ.