ಮೋದಿ ಸುಳ್ಳಿನ ಮಾಸ್ಟರ್

ಪಾಟ್ನಾ,ಮೇ.೨೭- ದೇಶದ ಮತದಾರರಿಗೆ ನೀಡಿದ ಯಾವುದೇ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅವರೊಬ್ಬ ಸುಳ್ಳಿನ ಮಾಸ್ಟರ್ ಎಂದು ಕರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು, ಸ್ವಿಸ್ ಬ್ಯಾಂಕ್‌ನಲ್ಲಿ ಅಡಗಿರುವ ಕಪ್ಪು ಹಣ ತಂದ ಎಲ್ಲರ ಖಾತೆಗೆ ಹಾಕುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣ, ದೇಶದಲ್ಲಿ ೧೦೦ ಸ್ಮಾರ್ಟ್ ಮಾಡುವುದಾಗಿ ಭರವಸೆ ನೀಡಿದ್ದರು. ಇದರಲ್ಲಿ ಯಾವುದಾದರು ಒಂದು ಈಡೇರಿದೆಯಾ ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಕೊನೆಯ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೇಶದ ಜನರಿಗೆ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಮಂಕುಬೂದಿ ಎರೆಚುತ್ತಿದ್ದಾರೆ. ಈ ಮೂಲಕ ತಾವೊಬ್ಬ ಸುಳ್ಳಿನ ಸರದಾರ ಎನ್ನುವುದನ್ನು ಅವರು ಮತ್ತೆ ಮತ್ತೆ ನಿರೂಪಿಸುತ್ತಿದ್ದಾರೆ ಎಂದಿದ್ದಾರೆ.
ದೇಶದಲ್ಲಿ ಅಪ್ಪಿ ತಪ್ಪಿ ಎನ್‌ಡಿಎ ಅಥವಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಸ್ವಿತ್ವಕ್ಕೆ ಬಂದರೆ ಸರ್ವಾಧಿಕಾರಿಯ ಅಡಿಯಲ್ಲಿ ದೇಶದ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಒಂದೇ ರಾಜ್ಯದಲ್ಲಿ ಸುಮಾರು ಐದು ಲಕ್ಷ ಉದ್ಯೋಗಗಳನ್ನು ಯುವಕರಿಗೆ ನೀಡಿದ್ದಾರೆ. “ಇಡೀ ದೇಶದಲ್ಲಿ ಎಷ್ಟು ಉದ್ಯೋಗಗಳನ್ನು ನೀಡಬಹುದು ಎಂಬುದನ್ನು ಊಹಿಸಿ” ಎಂದು ಅವರು ಹೇಳಿದರು.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎ ತೆಕ್ಕೆಗೆ ಮರಳಿದ್ದಕ್ಕಾಗಿ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಭವಿಷ್ಯದಲ್ಲಿ ಅವರನ್ನು ಮಹಾಮೈತ್ರಿಕೂಟಕ್ಕೆ ಅವರನ್ನು ವಾಪಸ್ ತೆಗೆದುಕೊಳ್ಳಬೇಡಿ ಎಂದು ತೇಜಸ್ವಿ ಯಾದವ್ ಅವರಿಗೆ ಸಲಹೆ ನೀಡಿದರು.

ಇಂಡಿಯಾ ಸರ್ಕಾರ ರಚನೆ: ಖರ್ಗೆ
ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ.ಅದೇ ರೀತಿ ಕೇಂದ್ರದಲ್ಲಿಯೂ ಯೋಜನೆ ಈಡೇರಿಸಿ ಜನರಿಗೆ ಕೊಟ್ಟ ವಾಗ್ದಾನ ಪೂರೈಸುತ್ತೇವೆ ಎಂದಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ೭೨,೦೦೦ ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಿದ್ದೇವೆ. ಮತ್ತೊಮ್ಮೆ ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆ ಆದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ.’