ನವದೆಹಲಿ,ಮಾ.೩೦- ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ಅವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ, ಈ ಪ್ರಕರಣದಲ್ಲಿ ನರೇಂದ್ರಮೋದಿ ಅವರು ಇದ್ದಾರೆ. ಅವರ ಹೆಸರನ್ನು ಹೇಳಿ ಎಂದು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು. ಆದರೂ ಬಿಜೆಪಿ ಎಂದೂ ಗಲಾಟೆ ಮಾಡಲಿಲ್ಲ ಎಂದರು.
ನರೇಂದ್ರಮೋದಿ ಸರ್ಕಾರವು ಸಿಬಿಐ ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಆಂಗ್ಲ ಖಾಸಗಿ ಚಾನಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ನೀಡಿದ ಅಮಿತ್ ಶಾ, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿ ಅವರ ಮೇಲೆ ಆರೋಪ ಹೊರಿಸಲು ಸಿಬಿಐ ಒತ್ತಡ ಹೇರಿತ್ತು ಎಂಬುದನ್ನು ಬಹಿರಂಗಪಡಿಸಿದರು.
ಮಾನನಷ್ಟ ಮೊಕ್ಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ಗಾಂಧಿ, ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ಅಳುತ್ತ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅನಗತ್ಯವಾಗಿ ಪ್ರಧಾನಿ ಮೋದಿ ಅವರ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂದರು.
ನ್ಯಾಯಾಲಯದ ತೀರ್ಪಿಗೂ ಪ್ರಧಾನಿಯವರಿಗೂ ಯಾವ ಸಂಬಂಧವಿದೆ. ರಾಹುಲ್‌ಗಾಂಧಿ ತಮ್ಮ ಶಿಕ್ಷೆಗೆ ತಡೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಬಹುದಿತ್ತು. ಅದು ಬಿಟ್ಟು ಪ್ರಧಾನಿ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿ ಶಾಸನ ಸಭೆಯ ಸ್ಥಾನ ಕಳೆದುಕೊಂಡು ಏಕೈಕ ರಾಜಕಾರಣಿ ರಾಹುಲ್‌ಗಾಂಧಿ
ಏನಲ್ಲ. ಹಿಂದೆ ಸಹ ಇಂತಹ ಹಲವು ಪ್ರಕರಣಗಳು ಕಣ್ಮುಂದೆ ಇವೆ ಎಂದರು.