ಮೋದಿ ಸಾಮರ್ಥ್ಯದಿಂದ ಗೆಲುವು: ಆರ್‌ಎಸ್‌ಎಸ್‌ನಿಂದ ಅಲ್ಲ

ನವದೆಹಲಿ,ಮೇ.೨೪- ಬಿಜೆಪಿ ಪಕ್ಷದ ಸರ್ವೋಚ್ಚ ನಾಯಕ ಪ್ರಧಾನಿ ನರೇಂದ್ರ ಮೋದಿ. ಅವರು ಆರ್‌ಎಸ್‌ಎಸ್ ಮೀರಿ ಬೆಳೆದಿದ್ದಾರೆ. ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯದಿಂದ ಗೆಲ್ಲುತ್ತಿದ್ದಾರೆಯೇ ಹೊರತು ಆರ್‌ಎಸ್‌ಎಸ್‌ನಿಂದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ಮತದಾರರನ್ನು ಒಗ್ಗೂಡಿಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಬರುತ್ತಿಲ್ಲ ಎಂಬ ಊಹಾಪೋಹದ ನಡುವೆಯೇ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್‌ಎಸ್‌ಎಸ್ ಬೆಂಬಲ ಅಗತ್ಯವಿಲ್ಲ ಎನ್ನುವ ನಡ್ಡಾ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧ ಹದಗೆಡುತ್ತಿದೆ ಎಂಬ ಊಹಾಪೋಹಗಳಿಗೆ ಕಾರಣವಾಗುವುದರಲ್ಲಿ ಆಶ್ಚರ್ಯವಿಲ್ಲ. ಅಂತಿಮವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಕಂದಕ ನಿರ್ಮಾಣವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಬಿಜೆಪಿ ಸರ್ಕಾರಕ್ಕೆ ತನ್ನ ನಿರಂತರ ಬೆಂಬಲಕ್ಕಾಗಿ ತನಗೆ ಪ್ರತಿಫಲ ನೀಡಿಲ್ಲ ಮತ್ತು ತಳಮಟ್ಟದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಹಿಂಜರಿಯುತ್ತಿದೆ ಎಂದು ಆರ್‌ಎಸ್‌ಎಸ್ ಭಾವಿಸಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಜೆಪಿ ನಡ್ಡಾ, ನಮಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಮೋಚ್ಚ ನಾಯಕ, ನಮಗೆ ಆರ್‌ಎಸ್‌ಎಸ್ ಬೆಂಬಲ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಮೀರಿ ಬೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರು ಅಂತಿಮವಾಗಿ ಬಿಜೆಪಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮೊದಲ ಮೂರು ಹಂತದ ಮತದಾನದಲ್ಲಿ ಪಕ್ಷ ಕಡಿಮೆ ಮತದಾನವಾದ ನಂತರ ಆರ್‌ಎಸ್‌ಎಸ್ ಸಕ್ರಿಯವಾಯಿತು ಮತ್ತು ಅವರ ಪ್ರಮುಖ ಬೆಂಬಲಿಗರೊಂದಿಗೆ ಪ್ರಧಾನಿಗೆ ಬೆಂಬಲ ಸೂಚಿಸುತಿದೆ ಎಂದಿದ್ದಾರೆ.
ಚುನಾವಣಾ ಬೂತ್‌ಗಳನ್ನು ನಿರ್ವಹಿಸುವ, ಮತದಾರರನ್ನು ಮತಗಟ್ಟೆಗಳಿಗೆ ನೂಕುವ ಮತ್ತು ತಮ್ಮ ಮತದಾರರ ನೋಂದಣಿ ವಿವರಗಳನ್ನು ಅವರಿಗೆ ಹಸ್ತಾಂತರಿಸುವ ಹೆಚ್ಚಿನ ಸ್ವಯಂಸೇವಕರು ಆರ್‌ಎಸ್‌ಎಸ್ ಕಾರ್ಯಕರ್ತರು. ಆರ್‌ಎಸ್‌ಎಸ್ ಸಂಪೂರ್ಣ ಕುಟುಂಬ ಘಟಕಗಳನ್ನು ಸಜ್ಜುಗೊಳಿಸುತ್ತದೆ ಎಂದಿದ್ದಾರೆ.
ವಯಸ್ಕರು ಬಿಜೆಪಿ ಅಥವಾ ಆರ್‌ಎಸ್‌ಎಸ್ ಮುಂಭಾಗದ ಸಂಘಟನೆಯಲ್ಲಿದ್ದರೆ, ಯುವ ವಯಸ್ಕರು ಭಾರತೀಯ ಜನತಾ ಯುವ ಮೋರ್ಚಾ ಅಥವಾ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿರಬಹುದು. ಮಕ್ಕಳು ಆರ್‌ಎಸ್‌ಎಸ್ ಬೆಳಗಿನ ಶಾಖೆಯ ಸಭೆಗಳಿಗೆ ಹಾಜರಾಗುತ್ತಿರಬಹುದು, ಅಲ್ಲಿ ಅವರು ಹಿಂದೂ ರಾಷ್ಟ್ರೀಯತೆಯನ್ನು ಕಲಿಸುತ್ತಾರೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಕೆಲಸ ಮಾಡದಿರಲು ಯಾವುದೇ ಕಾರಣವಿಲ್ಲ. ಮೋದಿ ಆಡಳಿತ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಿ, ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದೆ. ಜಮ್ಮುವಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದಂತೆ ಆರ್‌ಎಸ್‌ಎಸ್‌ನ ಹಿಂದೂ ಬಹುಸಂಖ್ಯಾತ ಅಜೆಂಡಾವನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ ಎಂದಿದ್ದಾರೆ.