ಮೋದಿ ಸರ್ಕಾರ ಬಡವರ ಹೊಟ್ಟೆಗೆ ಕಲ್ಲು ಹಾಕುತ್ತಿದೆ :ಎಸ್.ಡಿ.ಪಿ.ಐ

ವಿಜಯಪುರ : ಜು.22:ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬದುಕಿನ ಮೇಲೆ ಪ್ರಹಾರ ನಡೆಸುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಸ್.ಡಿ.ಪಿ.ಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್‍ಡಿಪಿಐ ವಿಜಯಪುರ ಜಿಲ್ಲಾಧ್ಯಕ್ಷರಾದ ಅತ್ತಾವುಲ್ಲಾ ದ್ರಾಕ್ಷಿ ಮಾತನಾಡಿ, ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬದುಕಿನ ಮೇಲೆ ಪ್ರಹಾರ ನಡೆಸಿದೆ. ಕೇಂದ್ರದ ತೆರಿಗೆ ನೀತಿ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕಿದೆ. ಈಗಾಗಲೇ ಪೆಟ್ರೋಲ್ ಡಿಸೇಲ್ ಆಹಾರ ಪದಾರ್ಥಗಳ ಮೇಲೆ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಮಧ್ಯಮ ವರ್ಗ ಮತ್ತು ಬಡವರ ಬದುಕು ಜಿಎಸ್‍ಟಿ ಹೆಚ್ಚಳದಿಂದ ಮತ್ತಷ್ಟು ದುರ್ಬಲವಾಗಿದೆ. ಕಳೆದ ಬಾರಿ ಜಿಎಸ್ ಟಿಯನ್ನು ಜಾರಿಗೆ ತರುವ ವೇಳೆ ಪ್ರಧಾನಿ ಮೋದಿಯವರು ಈ ಹಿಂದಿನ ಸರ್ಕಾರಗಳು ಅಕ್ಕಿ ಮತ್ತು ಹಾಲಿಗೂ ತೆರಿಗೆ ಪಡೆಯುತ್ತಿತ್ತು.
ನನ್ನ ಸರ್ಕಾರ ಯಾವುದೇ ಕಾರಣಕೋ ಅಕ್ಕಿ ಮತ್ತು ಹಾಲಿಗೆ ಜಿಎಸ್ ಟಿ ಪಡೆಯುವುದಿಲ್ಲ ಎಂದಿದ್ದರು. ಇದೀಗ ಪ್ರಧಾನಿ ಮೋದಿಯವರು ಎಂದಿನಂತೆ ಮಾತು ತಪ್ಪಿದ್ದು, ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಕ್ರೂರ ಸರ್ಕಾರದಿಂದ ಮಾತ್ರ ಇಂತಹ ತೀರ್ಮಾನ ಕೈಗೊಳ್ಳಲು ಸಾಧ್ಯ. ಕಾರ್ಪೋರೇಟ್ ಕಂಪನಿಗಳು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ ಅವರಿಗೆ ಕೆಂಪುಹಾಸು ಹಾಕುವ ಸರ್ಕಾರಕ್ಕೆ ಬಡವರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ಸಾಬೀತಾಗಿದೆ. ಅಚ್ಚೆ ದಿನ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ರಕ್ತವನ್ನು ಹೀರಿ ಅವರ ಬದುಕನ್ನು ಕಸಿಯುತ್ತಿದೆ. ಜನ ಸಾಮಾನ್ಯರು ಕೇಂದ್ರದ ಈ ಜನವಿರೋಧಿ ಮತ್ತು ದುಷ್ಟ ನೀತಿಯನ್ನು ಅರಿತು ಈಗಲೇ ಈ ಬಗ್ಗೆ ಕಾನೂನಾತ್ಮಕ ರೀತಿಯಲ್ಲಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಭಾರತ ಮತ್ತೊಂದು ಶ್ರೀಲಂಕಾ ಆಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಮೋದಿ ಸರ್ಕಾರ ಕೂಡಲೇ ದಿನ ಬಳಕೆಯ ಆಹಾರ ವಸ್ತುಗಳ ಮೇಲೆ ಹಾಕಿರುವ ಜಿಎಸ್ ಟಿ ಆದೇಶವನ್ನು ಹಿಂಪಡೆಯಬೇಕೆಂದು ಎಸ್‍ಡಿಪಿಐ ಆಗ್ರಹಿಸಿ ಸರ್ಕಾರದ ಜನ ವಿರೋಧಿ ಆದೇಶಗಳನ್ನು ಜನರೊಂದಿಗೆ ಸೇರಿ ವಿರೋಧಿಸಲಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಕ್ ಸೈಯ್ಯದ, ಸಮಿಉಲ್ಲಾ ಬಡೇಘರ, ಮುನ್ನಾಪ್ ಪಠಾಣ, ಪಿಎಫ್ ಐ ಜಿಲ್ಲಾಧ್ಯಕ್ಷರಾದ ಅಶಫಾಕ ಜಮಖಂಡಿ, ಶಫೀಕ ಕನ್ನೂರ, ಸ್ಲಂ ಬೊರ್ಡ್ ಅಧ್ಯಕ್ಷರಾದ ಅಕ್ರಂ ಮಾಶ್ಯಾಳಕರ ಸೇರಿದಂತೆ ಹಲವು ಸಮಾಜ ಸೇವಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.