ಮೋದಿ ಸರ್ಕಾರದ 7 ವರ್ಷಗಳ ಸಾಧನೆ: ಸಸಿ ನೆಟ್ಟು ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ.
ಬೀದರ:ಮೇ.31: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಏಳು ವರ್ಷಗಳು ತುಂಬಿದ ಹಿನ್ನೆಲೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಸಾರ್ವಜನಿಕ ಸೇವೆಯಲ್ಲಿ ಭಾಗಿಯಾಗಿ ನಿರಂತರ ಕಾಯಕದ ಮಹತ್ವದ ಸಂದೇಶವನ್ನು ಜಿಲ್ಲೆಯ ಜನತೆಗೆ ತಲುಪಿಸಿದರು.
ತಮ್ಮ ತವರು ಕ್ಷೇತ್ರದಲ್ಲಿಯೇ ಇದ್ದು ಜನತೆಗೆ ಮಾಸ್ಕ ಮತ್ತು ಸ್ಯಾನಿಟೈರ್ ವಿತರಿಸಲು ಮತ್ತು ಸಸಿ ನೆಡಲು ಹಾಗೂ ಸಾರ್ವಜನಿಕ ಕುಂದು ಕೊರತೆ ಆಲಿಸಲು ಸಚಿವರು, ಮೊದಲಿಗೆ ತಮ್ಮ ಸ್ವಂತ ಊರಾದ ಬೋಂತಿ ಗ್ರಾಮವನ್ನೇ ಆಯ್ಕೆಮಾಡಿಕೊಂಡಿದ್ದು ವಿಶೇಷವಾಗಿತ್ತು.
ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಮದ ಬೇಕು-ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಬೋಂತಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೆ ವೇಳೆ ಸಚಿವರು ಸಸಿ ನೆಟ್ಟರು. ಗ್ರಾಮಸ್ಥರಿಗೆ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದರು.
ಈಗ ಲಾಕ್‍ಡೌನ್ ಇದೆ. ಯಾರು ಹೊರಗಡೆ ಬರಬಾರದು. ಮನೆಯಲ್ಲಿಯೇ ಇರಬೇಕು. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ ಧರಿಸಲು, ಸ್ಯಾನಿಟೈಜರ್ ಬಳಸಲು ಮತ್ತು ಈಗಾಗಲೇ ಜಾರಿಯಲ್ಲಿರುವ ಲಾಕ್‍ಡೌನ್ ಪಾಲನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಕೇಂದ್ರ ಸುಧಾರಣೆಗೆ ಗಡುವು: ದಾಬಕಾ ಆರೋಗ್ಯ ಕೇಂದ್ರದಲ್ಲಿ ಶುಚಿತ್ವ ಇಲ್ಲ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಚವ್ಹಾಣ್ ಅವರು, ಬೋಂತಿ ಭೇಟಿ ಬಳಿಕ ದಾಬಕಾ ಆರೋಗ್ಯ ಕೇಂದ್ರಕ್ಕು ಕೂಡ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ಹಾಗೆ ಕಾರ್ಯನಿರ್ವಹಿಸಬೇಕು ಎಂದು ಇದೆ ವೇಳೆ ಅಲ್ಲಿನ ಮುಖ್ಯ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಶುಚಿತ್ವಕ್ಕೆ ಒಂದು ವಾರದ ಗಡುವು ವಿದಿಸಿದರು.
ಹೊಕ್ರಾಣಕ್ಕೂ ಭೇಟಿ: ಹೊಕ್ರಾಣ ಗ್ರಾಮ ಪಂಚಾಯಿತಿ ಆವರಣದಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ಸಚಿವರು ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಿದರು. ಜೊತೆಗೆ ಸಸಿಗಳನ್ನು ಕೂಡ ನೆಟ್ಟರು. ಕೋವಿಡ್ ಮಹಾಮಾರಿಯಿಂದ ರಕ್ಷನೆಗೋಸ್ಕರ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದ ಸಚಿವರಿಗೆ ಹೊಕ್ರಾಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೆಲ್ಯೂಟ್ ಹೊಡೆದು ಗೌರವಿಸಿದ್ದು ವಿಶೇಷವಾಗಿತ್ತು.
ಪೊಲೀಸ್ ಅಧಿಕಾರಿಗಳಿಗೆ ಸೂಚನೆ: ಗ್ರಾಮೀಣ ಭಾಗದಲ್ಲಿ ಕೂಡ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ತಾವುಗಳು ತಮ್ಮ ತಮ್ಮ ವ್ಯಾಪ್ತಿಯ ಹಳ್ಳಿಹಳ್ಳಿಗಳಲ್ಲಿ ಈಗಿನಿಂದಲೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ ಸಚಿವರು, ಕರ್ತವ್ಯಕ್ಕೆ ಅನವಶ್ಯಕ ಗೈರು ಹಾಜರಾಗುವ ಸಿಬ್ಬಂದಿಯ ವಿವರ ನೀಡಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ, ಮುಖಂಡರಾದ ಬಂಡೆಪ್ಪಾ ಕಂಟೆ, ಸುರೇಶ ಭೋಸ್ಲೆ, ಬಾಲಾಜಿ ನಾಯಕ್, ಸಚಿನ್ ರಾಠೋಡ ಸೇರಿದಂತೆ ಇತರರಿದ್ದರು.
ಕಮಲನಗರ ತಾಲೂಕಿಗೂ ಭೇಟಿ: ಔರಾದ್ ತಾಲೂಕಿನ ಪ್ರವಾಸದ ಬಳಿಕ ಸಚಿವರು ಕಮಲನಗರ ತಾಲೂಕಿನಲ್ಲೂ ಪ್ರವಾಸ ಕೈಗೊಂಡರು. ಚಿಮ್ಮೆಗಾಂವ್ ಗ್ರಾಮ ಪಂಚಾಯಿತಿನಲ್ಲಿ 18-44 ವಯೋಮಾನದ ವಿಕಲಚೇತನರಿಗೆ ನೀಡುತ್ತಿದ್ದ ಕೊವಿಡ್ ಲಸೀಕಾರಣದ ಕಾರ್ಯ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಔರಾದ್ ತಾಪಂ ಇಓ ಮಾಣಿಕರಾವ್ ಪಾಟೀಲ ಇದ್ದರು.
ಜನರಲ್ಲಿ ಕೈಜೋಡಿಸಿ ಮನವಿ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈಗ ಏಳು ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ತಾವು ಜನಸೇವಾ, ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ. ಬೋಂತಿ ಗ್ರಾಮದಿಂದ ಕಾರ್ಯಕ್ರಮ ಆರಂಭಿಸಿದ್ದೇನೆ. ಗ್ರಾಮಸ್ಥರಲ್ಲಿ ಕೊವಿಡ್ ಬಗ್ಗೆ ಅರಿವು ಮೂಡಿಸಲು ತಿಳಿಸಿದ್ದೇನೆ. ಈ ದೇಶದಿಂದ ಕೊವಿಡ್ ವೈರಸ್‍ನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮಾನ್ಯ ಪ್ರಧಾನಮಂತ್ರಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಹತ್ತು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದನ್ನು ಜನತೆಗೆ ತಿಳಿಸಿ, ಸಹಕಾರ ಕೋರುತ್ತಿದ್ದೇನೆ. ಜನರು ಅಧಿಕಾರಿಗಳಿಗೆ ಸಹಕರಿಸಬೇಕು. ಕೋವಿಡ್ ತಡೆ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ತಾವು ಸಾರ್ವಜನಿಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.