ಮೋದಿ ಮತ ಭೇಟೆಗೆ ಬಿಜೆಪಿ ಭರ್ಜರಿ ತಯಾರಿ

ಬೆಂಗಳೂರು,ಏ.೨೦:ದಿನದಿಂದ ದಿನಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಮತ್ತಷ್ಟು ಬಿರುಸುಗೊಂಡಿದೆ. ರಾಜ್ಯದಲ್ಲಿ ಮತ್ತೊಮ್ಮೆ ಶತಾಯ-ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಸಂಕಲ್ಪ ಮಾಡಿರುವ ಬಿಜೆಪಿ, ಮತದಾರರ ಮನ ಗೆಲ್ಲಲು ಮುಂದಾಗಿದ್ದು, ಇದೇ ಏ. ೨೮ ರಂದು ಪ್ರಧಾನಿ ನರೇಂದ್ರಮೋದಿ ಕೋಲಾರದಲ್ಲಿ ಮತ ಭೇಟೆ ನಡೆಸಲಿದ್ದಾರೆ.
ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಅವರು, ಇದಕ್ಕಾಗಿ ರಾಜ್ಯ ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಮೋದಿ ಮತಭೇಟೆ ನಡೆಸಲಿದ್ದಾರೆ.
ಈ ಬೃಹತ್ ಶಕ್ತಿ ಪ್ರದರ್ಶನಕ್ಕಾಗಿ ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಬಳಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ೩೦ ಎಕರೆ ಪ್ರದೇಶದಲ್ಲಿ ಭವ್ಯ ವೇದಿಕೆ ನಿರ್ಮಾಣವಾಗಲಿದ್ದು, ೧ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ವಿಧಾನಸಭಾ ಚುನಾವಣೆಗಾಗಿ ಮೋದಿ ಅವರು ಏ. ೨೮ ರಿಂದ ಮೇ ೭ರವರೆಗೆ ೭ ದಿನಗಳ ಕಾಲ ರಾಜ್ಯದ ಹಲವೆಡೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ೨೦ಕ್ಕೂ ಹೆಚ್ಚು ಕಡೆ ಸಮಾವೇಶ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲಕ್ಷ್ಮಣ್‌ಸವದಿ ಸೇರಿದಂತೆ ಹಲವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಬಿಜೆಪಿ ಪ್ರಬಲ ಪೈಪೋಟಿ ನಡೆಸಬೇಕಾಗಿದೆ. ಮತದಾರರನ್ನು ಸೆಳೆಯಲು ಮೋದಿ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.
ಇದರ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಚುನಾವಣಾ ಚಾಣಾಕ್ಷ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿರಿಸಿಕೊಂಡು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಮೋದಿ ಅವರು ಹೆಚ್ಚು ರ್‍ಯಾಲಿಗಳನ್ನು ನಡೆಸಲಿದ್ದಾರೆ. ಇದರ ಜತೆಗೆ ಹಳೆ ಮೈಸೂರು, ಕರಾವಳಿ, ಕಿತ್ತೂರು, ಮಧ್ಯಕರ್ನಾಟಕ ಹಾಗೂ ಬೆಂಗಳೂರು ನಗರವನ್ನು ಕೇಂದ್ರೀಕರಿಸಿ ರೋಡ್ ಶೋ ಸಮಾವೇಶಗಳನ್ನು ಆಯೋಜಿಸಲಾಗಿದೆ.