
ಶಿವಮೊಗ್ಗ, ಫೆ.೨೭-ಶಿವಮೊಗ್ಗ ನಗರದ ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಸಮಾವೇಶಕ್ಕೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಜನಸಾಗರವೇ ಹರಿದುಬಂದಿತು.
ವಿಮಾನ ನಿಲ್ದಾಣ ಆವರಣದಲ್ಲಿಯೇ ಸಮಾವೇಶ ಆಯೋಜಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ ನಿಗದಿತ ಅವಧಿಯೊಳಗೆ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದರಿಂದ, ಬೆಳಿಗ್ಗೆಯಿಂದಲೇ ನಾಗರೀಕರು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ದೃಶ್ಯ ಕಂಡುಬಂದಿತು.
ಭದ್ರತಾ ಸಿಬ್ಬಂದಿಗಳು ಪ್ರತಿಯೋರ್ವ ರನ್ನು ತಪಾಸಣೆಗೊಳಪಡಿಸಿ ಒಳಗೆ ಬಿಡುತ್ತಿದ್ದರು.
ಇದರಿಂದ ಸಮಾವೇಶ ಸ್ಥಳದ ಬಳಿಯೂ ನೂಕುನುಗ್ಗಲು ಕಂಡುಬಂದಿತು.
ಪರದಾಟ: ನರೇಂದ್ರ ಮೋದಿ ಅವರ ಸಮಾರಂಭಕ್ಕೆ ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್
ಗಳನ್ನು ಜನರನ್ನು ಕರೆತರಲು ನಿಯೋಜಿಸಲಾಗಿತ್ತು.
ಇದರಿಂದ ಬಸ್ ನಿಲ್ದಾಣಗಳಲ್ಲಿ ಭಾನುವಾರ ರಾತ್ರಿಯಿಂದಲೇ ಬಸ್ ಗಳ ಕೊರತೆ ಕಂಡುಬಂದಿದ್ದು, ಪರ ಊರುಗಳಿಗೆ ತೆರಳುವ ನಾಗರೀಕರು ಬಸ್ ಗಳಿಗೆ ಗಂಟೆಗಟ್ಟಲೆ ಕಾದು ನಿಲ್ಲುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.
ನಗರ ಸಾರಿಗೆ ಬಸ್ ಗಳ ಸಂಚಾರವು ಕಡಿಮೆಯಾಗಿದೆ. ಇದರಿಂದ ಕೆಲಸ ಕಾರ್ಯ, ಶಾಲಾಕಾಲೇಜು ಸೇರಿದಂತೆ ಮತ್ತೀತರ ಕೆಲಸ ಕಾರ್ಯಗಳಿಗೆ ತೆರಳುವವರು ತೀವ್ರ ತೊಂದರೆ ಪಡುವಂತಾಯಿತು.
ಬಿಜೆಪಿ ದಂಡು: ಸಮಾರಂಭವು ಸರ್ಕಾರಿ ಸಮಾರಂಭವಾಗಿತ್ತು. ಆದರೆ ಸಮಾವೇಶವು ಸಂಪೂರ್ಣ ಬಿಜೆಪಿ ಕಾರ್ಯಕರ್ತರು, ಮುಖಂಡರಿಂದಲೇ ತುಂಬಿತುಳುಕುತ್ತಿತ್ತು. ಶಿವಮೊಗ್ಗ ನಗರದ ಪ್ರಮುಖ ವೃತ್ತ, ರಸ್ತೆಗಳು ಬಿಜೆಪಿ ಬ್ಯಾನರ್, ಬಂಟಿಂಗ್ಸ್‌ಗಳು ರಾರಾಜಿಸಿದವು.