ಮೋದಿ, ಶಾ ಬಿಜೆಪಿ ಚುನಾವಣಾ ಏಜೆಂಟ್

ಬೆಂಗಳೂರು.ಫೆ೨೮:ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆ ಮೋದಿ, ಶಾ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಟೀಕಿಸಿರುವ ಸಿದ್ದರಾಮಯ್ಯ, ‘ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನ ಕೊಟ್ಟಿದ್ದೇವೆ. ಅನುದಾನಗಳನ್ನು ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳಿರುವ ಮೋದಿ, ಜನರ ಕ್ಷಮೆ ಕೇಳಬೇಕು. ರಾಜ್ಯದ ಪಾಲಿನ ಅನುದಾನಗಳನ್ನು ನ್ಯಾಯಯುತವಾಗಿ ಕೊಡಬೇಕು. ನೀವು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ಧೈರ್ಯ ಮಾಡಿಲ್ಲ. ರಸ್ತೆ, ರೈಲ್ವೆ, ತೆರಿಗೆ ಪಾಲಿನ ಕುರಿತು ಮಾತ್ರ ಮಾತನಾಡಿದ್ದೀರಿ. ಯಾಕೆ ಸುಳ್ಳು ಹೇಳಿ ಕರ್ನಾಟಕದ ಮರ್ಯಾದಸ್ಥ ಜನರ ಕಿವಿ ಮೇಲೆ ಹೂ ಇಡಲು ಪ್ರಯತ್ನಿಸುತ್ತೀರಿ? ಈ ಮಟ್ಟದ ಸುಳ್ಳುಗಳು ನಿಮ್ಮ ಪದವಿಗೆ ಯೋಗ್ಯವೆ ಎಂದೂ ಮೋದಿಯನ್ನು ಪ್ರಶ್ನಿಸಿದ್ದಾರೆ.