
ನವದೆಹಲಿ,ಆ.೮- ಕೋಮು ದಳ್ಳುರಿಯಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಅಮಾಯಕರ ಮಾರಣಹೋಮ, ಮಹಿಳೆಯರ ಬೆತ್ತಲೆ ಪ್ರಕರಣಗಳಿಂದ ಹಿಂಸಾಚಾರಕ್ಕೆ ಸಿಲುಕಿ ಕುಕಿ ಹಾಗೂ ಮೈತೇಯಿ ಸಮುದಾಯ ನಲುಗಿ ಹೋಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಸಂಭವಿಸಿದ್ದರು, ಪ್ರಧಾನಿ ನರೇಂದ್ರ ಮೋದಿಯವರು ಚಕಾರವೆತ್ತಿಲ್ಲ. ಈ ವಿಷಯವನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಇಂಡಿಯಾ ಮೈತ್ರಿ ಕೂಟ ಲೋಕಸಭೆಯಲ್ಲಿ ಪ್ರಧಾನಿ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತಿವ:ಒ ಚರ್ಚೆ ಆರಂಭಗೊಂಡಿದ್ದು, ಹಿಂಸಾಚಾರ ನಿಯಂತ್ರಿಸಿ ಶಾಂತಿ ಸ್ಥಾಪನೆ ಮಾಡುವಲ್ಲಿ ಮಣಿಪುರ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ವಿಪಕ್ಷಗಳ ಸದಸ್ಯರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಮೂರು ದಿನಗಳ ಕಾಲ ಲೋಕಸಭೆಯಲ್ಲಿ ಚರ್ಚೆ ನಡೆದ ನಂತರ ಪ್ರಧಾನಿ ಅವರು ಈ ತಿಂಗಳ ೧೦ ರಂದು ಉತ್ತರ ನೀಡಲಿದ್ದಾರೆ.ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಅವಿಶ್ವಾಸದ ವೇಳೆ ಮಾತನಾಡುವ ವೇಳೆ ಆಡಳಿತ ಪಕ್ಷದ ಸದಸ್ಯರು ರಾಹುಲ್ ಗಾಂಧಿ ಸದಸ್ಯತ್ವ ಅನರ್ಹ ಮತ್ತು ಮತ್ತೆ ಅದು ತೆರವಾದ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ,ವಾಗ್ವಾದಕ್ಕೂ ಕಾರಣವಾಯಿತು.
ವಿರೋಧ ಪಕ್ಷಗಳ ಮೈತ್ರಿ ಕೂಟ “ಇಂಡಿಯಾ” ಸಹಕಾರದೊಂದಿಗೆ ಕಾಂಗ್ರೆಸ್ ಸದಸ್ಯ ಗೌರವ್ ಗೊಗೆಯ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅನುವು ಮಾಡಿಕೊಟ್ಟು ನಿರ್ಣಯ ಮಂಡಿಸಿರುವ ಗೌರವ್ ಗೊಗೆಯ್ ಅವರಿಗೆ ಚರ್ಚೆ ಆರಂಭಿಸುವಂತೆ ಸೂಚನೆ ನೀಡಿದರು.
ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿ ಪಕ್ಷಗಳ ಸದಸ್ಯರು ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿರುವ ಮೌನ ಪ್ರತಿಭಟಿಸಿ ಸದನದ ಬಾವಿಗಿಳಿದ ಗದ್ದಲ ನಡೆಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲ ಕಾಲ ಮುಂದೂಡಿದ ಸಭಾಧ್ಯಕ್ಷರು ಮತ್ತೆ ಕಲಾಪ ಆರಂಭವಾದಾಗ ಅವಿಶ್ವಾಸ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಚರ್ಚೆ ಆರಂಭಿಸಿದ ಗೌರವ್ ಗೊಗೈಯ್, ಮಣಿಪುರದ ಪ್ರಕ್ಷುಬ್ಧತೆ ವಿಷಯವನ್ನು ಪ್ರಸ್ತಾಪಿಸಿ ಹಿಂಸಾಚಾರ ಹೆಚ್ಚಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ತರಾಟೆಗೆ ತೆಗದುಕಕೊಂಡಿದ್ದಾರೆ.ರಾಜ್ಯದಲ್ಲಿ ಅಶಾಂತಿಯ ಸುದೀರ್ಘ ಇತಿಹಾಸವನ್ನು ಹೇಳುವ ಮೂಲಕ ಗಡಿ ರಾಜ್ಯ ಮತ್ತು ಎನ್‌ಡಿಎ ಪ್ರತಿತಂತ್ರವನ್ನು ಮಾಡುತ್ತಿದೆ, ವಿಶೇಷವಾಗಿ ಹಲವಾರು ಬಿಜೆಪಿಯೇತರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದ್ದಾರೆ.
“ಪ್ರಧಾನಿ ಮೋದಿ ಇಲ್ಲಿಯವರೆಗೆ ಮಣಿಪುರಕ್ಕೆ ಏಕೆ ಹೋಗಿಲ್ಲ ಎಂದು ಪ್ರಶ್ನಿಸಿದ ಅವರು ಹಿಂಸಾಚಾರ ಹೆಚ್ಚಿದ್ದರೂ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಯಾಕೆ ವಜಾ ಮಾಡಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೌನವ್ರತಕ್ಕೆ ಆಕ್ಷೇಪ:
ಮಣಿಪುರ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೌದಿ ಅವರು ಮೌನವ್ರತ’ ನಡೆಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ ಅವರ ಮೌನವನ್ನು ಮುರಿಯಲು ಅವಿಶ್ವಾಸ ನಿರ್ಣಯ ತರಬೇಕಾಯಿತು ಎಂದು ಅವಿಶ್ವಾಸ ನಿರ್ಣಯ ತಂದ ಕ್ರಮವನ್ನು ಸಮರ್ಥಿಸಿಕೊಂಡರು.
ಮಣಿಪುರದ ಬಗ್ಗೆ ಮಾತನಾಡಲು ಸುಮಾರು ೮೦ ದಿನಗಳು ಏಕೆ ಬೇಕಾಯಿತು ಮತ್ತು ಪ್ರಧಾನಿ ಮಣಿಪುರವನ್ನು ಉಲ್ಲೇಖಿಸಿ ಭಾಷಣ ಮಾಡಿದ್ದು ಕೇವಲ ೩೦ ಸೆಕೆಂಡುಗಳು. ಇದರ ಅರ್ಥವೇನು ಎಂದು ಪ್ರಶ್ನಿಸಿದ್ಧಾರೆ
ಪ್ರಧಾನಿ ಸಂಪೂರ್ಣ ವಿಫಲ
ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಗೌರವ್ ಗೊಗಯ್ ಆರೋಪಿಸಿದ್ದಾರೆ.ಪ್ರಧಾನಿ ವೈಫಲ್ಯದಿಂದಾಗಿಯೇ ಮಣಿಪುರದಲ್ಲಿ ೧೫೦ ಜನರು ಹಿಂಸಾಚಾರದಿಂದ ಮೃತಪಟ್ಟಿದ್ದಾರೆ. ಸುಮಾರು ೫೦೦೦ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಸುಮಾರು ೬೦,೦೦೦ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ ಮತ್ತು ಸುಮಾರು ೬೫೦೦ ಎಫ್‌ಐಆರ್‌ಗಳು ದಾಖಲಾಗಿವೆ ಎಂದಿದ್ದಾರೆ.
ಗಲಭೆ ಆರಂಭವಾದಾಗ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಸಮುದಾಯಗಳ ನಡುವೆ ಮಾತುಕತೆ, ಶಾಂತಿ ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಬದಲಾಗಿ ಎತ್ತಿಕಟ್ಟುವ ಕೆಲಸ ಮಾಡಿದ್ದೇ ಈ ಅನಾಹುತಕ್ಕೆ ಕಾರಣ ಎಂದು ತರಾಟೆಗೆ ತೆಗೆದುಕೊಖಡರು.
ವಿಪ್ ಜಾರಿ
ಇಂದಿನಿಂದ ಮೂರು ದಿನಗಳ ಕಾಲ ಆವಿಶ್ವಾಸ ನಿರ್ಣಯದ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲೆಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದೆ.
ಇದೇ ವೇಳೆ ವಿರೋಧ ಪಕ್ಷ ಇಂಡಿಯಾ ಮೈತ್ರಿಕೂಟದ ಸದಸ್ಯರೂ ಕೂಡ ತಮ್ಮ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದು ಅವಿಶ್ವಾಸ ನಿರ್ಣಯದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮತ ಚಲಾಯಿಸಲು ಸೂಚನೆ ನೀಡಿವೆ.
ಎರಡನೇ ಬಾರಿ ಅವಿಶ್ವಾಸ
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ಮಂಡಿಸಿದ ಎರಡನೇ ಅವಿಶ್ವಾಸ ನಿರ್ಣಯ ಇದಾಗಿದೆ, ಈ ಮೊದಲು ೨೦೧೮ ರ ಜುಲೈ ೨೦ ರಂದು ಮಂಡಿಸಲಾಗಿದ್ದ ಅವಿಶ್ವಾಸದಲ್ಲಿ ಎನ್ ಡಿಎ ಒಕ್ಕೂಟ ಅವಿಶ್ವಾಸದಲ್ಲಿ ಗೆಲುವು ಸಾಧಿಸಿತ್ತು.
ಇದೀಗ ಮಣಿಪುರದ ವಿಷಯದಲ್ಲಿ ಪ್ರಧಾನಿ ಮೌನವನ್ನು ಪ್ರಶ್ನಿಸಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಎರಡು ದಿನಗಳ ಚರ್ಚೆ ಬಳಿಕ ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ.ಲೋಕಸಭೆ ಪ್ರಸ್ತುತ ೫೪೩ ಸ್ಥಾನಗಳನ್ನು ಹೊಂದಿದ್ದು, ಐದು ಸ್ಥಾನಗಳು ಖಾಲಿ ಇವೆ. ಬಿಜೆಪಿ ನೇತೃತ್ವದ ಎನ್‌ಡಿಎ ೩೩೦ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ, ವಿರೋಧ ಪಕ್ಷದ ಮೈತ್ರಿಕೂಟ ೧೪೦ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಮತ್ತು ಸುಮಾರು ೬೦ ಸದಸ್ಯರು ಎರಡು ಗುಂಪುಗಳಲ್ಲಿ ಯಾವುದಕ್ಕೂ ಹೊಂದಿಕೆಯಾಗದ ಪಕ್ಷಗಳಿಗೆ ಸೇರಿದ್ದಾರೆ.