
ಬೆಂಗಳೂರು,ಮೇ.೭-ಕಳೆದ ೩ ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಹರಿಹಾಯ್ದಿದ್ದಾರೆ.
ಆನ್ಸರ್ ಮಾಡಿ ಮೋದಿ ಹ್ಯಾಷ್ ಟ್ಯಾಗ್ ಆರಂಭಿಸಿರುವ ಸಿದ್ದರಾಮಯ್ಯ ಪ್ರಧಾನಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮೋದಿಯವರು ಕರ್ನಾಟಕದಲ್ಲಿ ಠಿಕಾಣಿ ಹೂಡಿ ಬಾಯಿ ತುಂಬಾ ಮಾತನಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅಂದರೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್ ಒನ್ ತಾಣವಾಗಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಈ ಪಟ್ಟಿ ೧೭ನೇ ಸ್ಥಾನಕ್ಕೆ ಕುಸಿದಿದೆ ಎಂದು ಕಿಡಿಕಾರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯದ ಪ್ರಮಾಣ ೨೦೨೧ರಲ್ಲಿ ಶೇ.೧೮ರಷ್ಟು ಹೆಚ್ಚಳವಾಗಿದೆ. ಎಸ್‌ಡಿಪಿಐ ಕಾಯಿದೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ೧೪೯೩ರಷ್ಟು ಹೆಚ್ಚಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡದೇ ಇರುವ ಕಾರಣಕ್ಕೆ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರವೆಲ್ ಮತ್ತು ಟ್ಯಾಂಕ್ ನೀರು ಬಳಸಬೇಕಾಗಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.