ಮೋದಿ ವಿರುದ್ಧ ಸಿದ್ದು ಗರಂ

ಬೆಂಗಳೂರು,ಏ,೯:ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿರುವಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಕೆಎಂಎಫ್‌ನ್ನು ಮುಗಿಸಲು ಹೊರಟಿರುವ ವಿಚಾರವನ್ನು ಪ್ರಸ್ತಾಪಿಸಿ ಮೋದಿ ಅವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ ಕಿತ್ತುಕೊಳ್ಳುವುದಕ್ಕೋ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಉತ್ತರ ಕೊಡಿ ಮೋದಿ ಅವರೇ, ನಂದಿನಿ ಉಳಿಸಿ ಹ್ಯಾಶ್‌ಟ್ಯಾಗ್ ಅಡಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯರವರು, ಕೇಂದ್ರ ಸಹಕಾರ ಸಚಿವ ಅಮಿತ್ ಶಾರವರು ಅಮೂಲ್ ಜತೆ ಕೆಎಂಎಫ್ ವಿಲೀನದ ಪ್ರಸ್ತಾಪ ಮಾಡಿದ ದಿನದಿಂದ ನಂದಿನಿ ಹಾಲು ಮತ್ತು ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ. ಏನಿದು ನಿಮ್ಮ ಕರಾಮತ್ತು, ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತಿನಿಂದ ಕಳುಹಿಸುತ್ತಿರುವ ಅಮುಲ್ ಉತ್ಪನ್ನಗಳ ಮಾರಾಟ ಬಿರುಸಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ, ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ನಮ್ಮ ವಿಜಯಾಬ್ಯಾಂಕ್‌ನ್ನು ನುಂಗಿದ್ದ ಬರೋಡಾ ಬ್ಯಾಂಕ್ ಗುಜರಾತ್‌ನದ್ದು, ಬಂದರು, ಏರ್‌ಪೋರ್ಟ್ ನುಂಗಿದ ಅದಾನಿ ಗುಜರಾತ್‌ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮೂಲ್ ಗುಜರಾತ್‌ನದ್ದು, ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಈ ಗುಜರಾತಿ ಆಕ್ರಮಣ ಸಹಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅಮೂಲ್ ಉತ್ಪನ್ನಗಳ ಮಾರಾಟವನ್ನು ಗೌರವ ಪೂರಕವಾಗಿ ನಿಲ್ಲಿಸಿ ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ, ಪರಿಣಾಮ ನೆಟ್ಟಗಾಗದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.