ಮೋದಿ, ವಿರುದ್ಧ ಪ್ರಿಯಾಂಕ ಆಕ್ರೋಶ


ನವದೆಹಲಿ,ಏ.೨೧- ದೇಶದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನರು ನರಳುತ್ತಿದ್ದರೆ ಚುನಾವಣಾ ರ್‍ಯಾಲಿಗಳಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಜೋಕ್ ಮಾಡಿಕೊಂಡು ನಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಗಾಂಧಿ ವಾಧ್ರಾ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಕೊರೊನಾ ಸೋಂಕಿನ ಪರೀಕ್ಷೆಯನ್ನು ಹೆಚ್ಚಿಸಿ ವೈರಾಣು ನಿಯಂತ್ರಣ ಕಡಿಮೆ ಮಾಡಲು ವಿಫಲರಾಗಿದ್ದಾರೆ. ಸೋಂಕು ನಿಗ್ರಹಕ್ಕೆ ಬೇಕಾದ ವೈದ್ಯಕೀಯ ಮೂಲ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ೫ ಕೋಟಿ ಜನರಿಗೆ ಕೋವಿಡ್ ಸೋಂಕು ತಗುಲಿರುವುದು ಸೆರೋ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯನನು ಚುರುಕುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಆದರೆ, ಸರ್ಕಾರ ಶಙ. ೭೦ ರಷ್ಟು ಮಂದಿಗೆ ಆಂಟಿಜೆನ್ ಪರೀಕ್ಷೆ ಹಾಗೂ ಉಳಿದ ೩೦ ರಷ್ಟು ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ ಎಂದು ದೂರಿದ್ದಾರೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ನರೇಂದ್ರಮೋದಿ ರ್‍ಯಾಲಿಗಳನ್ನು ನಡೆಸಿ ಪ್ರಚಾರ ಕೈಗೊಂಡಿರುವುದಕ್ಕೆ ಕಿಡಿಕಾರಿರುವ ಪ್ರಿಯಾಂಕ, ದೇಶದಲ್ಲಿ ಆಕ್ಸಿಜನ್, ಹಾಸಿಗೆ ಮತ್ತು ಔಷಧಿಗಳ ಕೊರತೆ ವ್ಯಾಪಕವಾಗಿದ್ದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.