ಮೋದಿ ವಿರುದ್ಧ ಪಿಣರಾಯಿ ವಾಗ್ದಾಳಿ

ತಿರುವನಂತಪುರಂ,ಸೆ.೧೯- ದೇಶದ ಒಕ್ಕೂಟ ವ್ಯವಸ್ಥೆ ಬದಲಾಯಿಸಿ ರಾಷ್ಟ್ರಾದ್ಯಕ್ಷರ ಮಾದರಿಯ ಆಡಳಿತ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಣಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ಚಿಲುಮೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ‘ಒಂದು ಭಾಷೆ’, ‘ಒಂದು ಧರ್ಮ’, ‘ಒಂದು ತೆರಿಗೆ’, ‘ಒಂದು ಕಾನೂನು’, ಮತ್ತು ’ಒಂದು ಚುನಾವಣೆ’ ಹೇರುವ ಪ್ರಯತ್ನ ನಡೆಸುತ್ತಿದೆ. ಇದನ್ನೆಲ್ಲ ವಿರೋಧಿಸಿ ಜಾರಿಗೆ ಬರದಂತೆ ತಡೆಯಬೇಕು ಎಂದು ಆಗ್ರಹಿಸಿದ್ಧಾರೆ.

ತಿರುವನಂತಪುರಂನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ದೇಶ ಪರೀಕ್ಷೆಯ ಕಾಲವನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಒಂದು ದೇಶ ಒಂದು ಚುನಾವಣೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ದೇಶದ ಒಕ್ಕೂಟ ರಚನೆಯನ್ನು ಬದಲಿಸುವ ಪ್ರಯತ್ನ ನಡೆದಿದೆ. ರಾಜಕೀಯದ ತತ್ವಗಳನ್ನು ಒಳಗೊಂಡಿರುವ ಅಧ್ಯಕ್ಷೀಯ ವ್ಯವಸ್ಥೆಯಾಗಿ ಪರಿವರ್ತಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶದ ಒಕ್ಕೂಟ ವ್ಯವಸ್ಥೆಯ ಆಡಳಿತವನ್ನು ಬದಲಾಯಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಹೋರಾಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಫೆಡರಲ್ ಮಾದರಿಯ ಆಡಳಿತ ಅನುಸರಿಸುತ್ತದೆ, ಆದರೆ, ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಅಧ್ಯಕ್ಷೀಯ ಶೈಲಿಯನ್ನಾಗಿ ಪರಿವರ್ತಿಸಲು ಉದ್ದೇಶಪೂರ್ವಕ ಪ್ರಯತ್ನ ಮಾಡಲಾಗುತ್ತಿದೆ. ಆಡಳಿತ, ಫೆಡರಲಿಸಂನ ತತ್ವಗಳನ್ನು ತೆಗೆದುಹಾಕಲಾಗುತ್ತಿದೆ, ಭಾರತದ ಕಲ್ಪನೆಯನ್ನು ನಾಶಮಾಡುವ ಈ ಪ್ರಯತ್ನಗಳ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದಿದ್ದಾರೆ.

ಭಾರತದ ಜಾತ್ಯತೀತ ರಚನೆಯನ್ನು ಬದಲಾಯಿಸಿ ಅದನ್ನು ಏಕ-ಧರ್ಮದ ರಾಷ್ಟ್ರವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ಹೆಜ್ಜೆಯಲ್ಲೂ ಅದನ್ನು ನೋಡಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.