ಮೋದಿ ವಿರುದ್ಧ ಅಲೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೦:ರಾಜ್ಯದಲ್ಲಾಗಲಿ ದೇಶದಲ್ಲಾಗಲಿ ಮೋದಿ ಪರವಾದ ಅಲೆ ಇಲ್ಲ, ಆದರೆ, ಪ್ರಬಲವಾದ ಮೋದಿ ಆಡಳಿತ ವಿರೋಧಿ ಅಲೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳು ಮೋದಿ ಮೇಲೆ ಅವಲಂಬಿತರಾಗಿದ್ದಾರೆ. ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ, ಎಲ್ಲೂ ಮೋದಿ ಅಲೆ ಇಲ್ಲ, ಮೋದಿ ವಿರುದ್ಧವಾದ ಆಡಳಿತ ವಿರೋಧಿ ಅಲೆ ಇದೆ. ಚುನಾವಣೆಯ ವಾತಾವರಣ ಕಾಂಗ್ರೆಸ್‌ನ ಪರವಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂಬ ಜಾಹೀರಾತಿನ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಕೊಟ್ಟಿರುವ ಆಶ್ವಾಸನೆಯನ್ನು ಈಡೇರಿಸಿಲ್ಲ. ಜರ ಖಾತೆಗೆ ೧೫ ಲಕ್ಷ ಹಾಕುತ್ತೇವೆ ಎಂದರು. ಅದನ್ನು ಕೊಟ್ಟಿದ್ದಾರಾ? ೨ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು ಮಾಡಿದ್ದಾರಾ. ರೈತರ ಆದಾಯ ದ್ವಿಗುಣಮಾಡಿದ್ದಾರಾ ಅಚ್ಚೆ ದಿನ ಬಂದಿದೆಯಾ ಹಾಗಾಗಿಯೇ ಚೆಂಬು ಜಾಹೀರಾತನ್ನು ಕಾಂಗ್ರೆಸ್ ಕೊಟ್ಟಿದೆ. ಹಳ್ಳಿ ಕಡೆ ಕೈಗೆ ಚೆಂಬು ಕೊಟ್ಟರು ಎನ್ನುವುದಿಲ್ಲವೇ ಅದನ್ನೇ ನಾವು ಹೇಳಿದ್ದೇವೆ ಅಷ್ಟೆ ಎಂದರು.ರಾಜ್ಯದ ಖಜಾನೆ ಖಾಲಿಯಾಗಿಲ್ಲ. ಚೊಂಬು ರಾಜ್ಯದ ಖಜಾನೆ ಖಾಲಿಯಾಗಿರುವ ಸಂಕೇತ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ ಎಂದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗೆ ಏನನ್ನೂ ಮಾಡಿಲ್ಲ. ಖಾಲಿ ಚೊಂಬು ಕೊಟ್ಟಿದೆ. ಅದನ್ನು ಹೇಳಿದರೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ಗೆ ಭಯ
ಜೆಡಿಎಸ್ ಕಂಡರೆ ಸಿದ್ದರಾಮಯ್ಯಗೆ ಭಯ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜೆಡಿಎಸ್ ಬಗ್ಗೆ ನಮಗೆ ಭಯ ಇದ್ದರೆ ಬಿಜೆಪಿ-ಜೆಡಿಎಸ್ ವಿರುದ್ಧ ಏಕಾಂಗಿಯಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿತ್ತೇ? ಭಯವಿರುವುದು ನಮಗಲ್ಲ, ಜೆಡಿಎಸ್‌ಗೆ ಹಾಗಾಗಿಯೇ ಅವರು ಬಿಜೆಪಿ ಜತೆ ಮೈತ್ರಿಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಈಗ ಕೋಮುವಾದಿಪಕ್ಷ,ಕುಮಾರಸ್ವಾಮಿ ಸಹ ಬಿಜೆಪಿ ಸಹ ಜತೆ ಕೈಗೂಡಿಸಿ ಕೋಮುವಾದಿಯಾಗಿದ್ದಾರೆ ಅವರು ಜೆಡಿಎಸ್ ಪಕ್ಷವನ್ನು ವಿಸರ್ಜಿಸುವುದು ಒಳ್ಳೆಯದು ಎಂದರು.
ಹುಬ್ಬಳ್ಳಿಯಲ್ಲಿ ಯುವತಿ ನೇಹಾ ಹತ್ಯೆ ಲವ್ ಜಿಹಾದ್ ಅಲ್ಲ, ಈ ಹತ್ಯೆಯನ್ನು ನಾನು ಖಂಡಿಸುತ್ತೇನೆ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಒಬ್ಬರ ಸಾವನ್ನು ಬಳಸಿಕೊಂಡು ರಾಜಕೀಯ ಮಾಡುವುದು ದುರ್ದೈವ ಹಾಗೂ ಖಂಡನೀಯ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಆರೋಪಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.