ಮೋದಿ ರೋಡ್ ಶೋ; ಸಂಭ್ರಮದಲ್ಲಿ ಮಿಂದೆದ್ದ ಅಭಿಮಾನಿಗಳು

ಕಲಬುರಗಿ:ಮೇ.3: ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಸಂಜೆ ಸುಮಾರು 5.30ರ ಹೊತ್ತಿಗೆ ನಗರದ ಪೊಲೀಸ್ ಪರೇಡ್ ಮೈದಾನ ಸಮೀಪದ ಹೆಲಿಪ್ಯಾಡ್‍ಗೆ ಸೇನಾ ಹೆಲಿಕಾಪ್ಟರ್ ಮೂಲಕ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಹುಮಾನಾಬಾದ್ ರಸ್ತೆಯ ಕೆಎಂಎಫ್ ಕಚೇರಿ ಎದುರಿನ ರಸ್ತೆಯಿಂದ ಸಂಜೆ 6.27ಕ್ಕೆ ರೋಡ್ ಶೋ ಆರಂಭಿಸಿದರು. ಈ ಮಧ್ಯೆ, ನಗರದ ನೆಹರೂ ಗಂಜ್ ಪ್ರದೇಶ, ಕಿರಾಣಾ ಬಜಾರ್, ಬಾಂಡೆ ಬಜಾರ್ ಮೂಲಕ ಚೌಕ್, ಸೂಪರ್ ಮಾರ್ಕೆಟ್ ಮೂಲಕ ಹಾದು ನಗರದ ಎಸ್‍ವಿಪಿ ವೃತ್ತದವರೆಗೆ ಸುಮಾರು ಐದುವರೆ ಕಿಲೋ ಮೀಟರ್ ರೋಡ್ ಶೋ ನಡೆಯಿತು.

ತೆರೆದ ವಾಹನದಲ್ಲಿ ವಿರಾಜಮಾನರಾಗಿ ನಿಂತಿದ್ದ ಮೋದಿ ಅವರೊಂದಿಗೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಜೊತೆಯಲ್ಲಿದ್ದರು. ರೋಡ್ ಶೋ ವೇಳೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಲಕ್ಷಾಂತರ ಅಭಿಮಾನಿಗಳ ಕಡೆಗೆ ಕೈ ಬೀಸಿದ ಪ್ರಧಾನಿ, ಕೆಲವೊಮ್ಮೆ ನಮಸ್ಕರಿಸುವ ಭಂಗಿಯೊಂದಿಗೆ ಮುಗುಳ್ನಗೆ ಚೆಲ್ಲುತ್ತಾ ಅಭಿಮಾನಿಗಳನ್ನು ಹುರಿದುಂಬಿಸಿದರು. ಹೀಗಾಗಿ, ರಸ್ತೆಯುದ್ದಕ್ಕೂ ಹರ್ ಹರ್ ಮೋದಿ, ಹರ್ ಹರ್ ಮೋದಿ ಘೋಷಣೆಗಳು ಮೊಳಗಿದವು.

ರಸ್ತೆಯ ಒಂದು ಬದಿಯಲ್ಲಿ ಮೋದಿ ಅವರಿದ್ದ ತೆರೆದ ವಾಹನ ಹೊರಟಿದ್ದರೆ ಅದರ ಪಕ್ಕದ ಮತ್ತೊಂದು ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸುನಾಮಿಯಂತೆ ಹೆಜ್ಜೆ ಹಾಕುತ್ತಿದ್ದುದು ಗಮನ ಸೆಳೆಯಿತು. ರೋಡ್ ಶೋ ಪ್ರಯುಕ್ತ ಮಧ್ಯಾಹ್ನ ಮೂರುವರೆ ಹೊತ್ತಿಗೆ ಹುಮನಾಬಾದ್ ರಸ್ತೆಯಿಂದ ಎಸ್.ವಿ.ಪಿ ವೃತ್ತದವರೆಗಿನ ಇಡೀ ರಸ್ತೆಯನ್ನು ಕೇಂದ್ರ ಮೀಸಲು ಪಡೆ ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಹೀಗಾಗಿ, ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದರಿಂದ ರಸ್ತೆಯ ಮೇಲೆ ಯಾವುದೇ ವಾಹನ ಓಡಾಟ ಮತ್ತು ಜನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿತ್ತು. ಅದರಲ್ಲೂ ಪ್ರಧಾನಿ ರೋಡ್ ಶೋ ಆರಂಭಗೊಂಡ ತಕ್ಷಣ ಕೇಂದ್ರ ಮೀಸಲು ಪಡೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ರಸ್ತೆಯುದ್ದಕ್ಕೂ ಯಾವುದೇ ಸಣ್ಣ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು.

ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೈಗಳಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದು ರೋಡ್ ಶೋ ವೇಳೆ ಪ್ರಧಾನಿ ಮೋದಿ ಅವರನ್ನು ಹುರಿದುಂಬಿಸಿದರು. ಬಹುತೇಕ ಎಲ್ಲ ಅಭಿಮಾನಿಗಳು ಕೇಸರಿ ಟೋಪಿಗಳನ್ನು ತೊಟ್ಟಿದ್ದರು. ಮತ್ತೊಂದೆಡೆ, ರಸ್ತೆಯುದ್ದಕ್ಕೂ ಬಿಜೆಪಿ ಬಾವುಟಗಳು, ಪ್ರಧಾನಿ ಮೋದಿಯವರ ಭಾವಚಿತ್ರಗಳು ರಾರಾಜಿಸುತ್ತಿದ್ದವು.

ಪ್ರಧಾನಿ ಭೇಟಿ ನಕಾರ:

ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಧಾನಿಗಳ ರೋಡ್ ಶೋ ಹಮ್ಮಿಕೊಂಡಿದ್ದಾಗ್ಯೂ, ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅಭ್ಯರ್ಥಿಗಳ ಪೈಕಿ ಯಾರೊಬ್ಬರನ್ನೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಲಭಿಸದೆ ಇರುವುದು ವಿಶೇಷವಾಗಿತ್ತು. ಜೊತೆಗೆ, ರೋಡ್ ಶೋ ಮುಕ್ತಾಯಗೊಂಡ ಬಳಿಕ ಕಲಬುರಗಿಯ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಪ್ರಧಾನಿ ಮೋದಿ ರಾತ್ರಿ ವಾಸ್ತವ್ಯ ಮಾಡಿದ ಸಂದರ್ಭದಲ್ಲೂ ಯಾವುದೇ ಅಭ್ಯರ್ಥಿ ಅವರನ್ನು ಭೇಟಿ ಮಾಡಲು ಅವಕಾಶ ದೊರೆಯಲಿಲ್ಲ. ಹೀಗಾಗಿ, ಎಲ್ಲ ಅಭ್ಯರ್ಥಿಗಳು ಮೋದಿ ಅವರನ್ನು ಭೇಟಿ ಮಾಡದೆಯೇ ಹಿಂದಿರುಗಬೇಕಾಯಿತು.


ಬಂಜಾರ ಸೊಬಗು, ಡೊಳ್ಳು ಕುಣಿತ

ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ಆರಂಭಿಸಲು ಹುಮನಾಬಾದ್ ರಸ್ತೆಗೆ ಆಗಮಿಸುತ್ತಿದ್ದಂತೆಯೇ ಬಂಜಾರ ಸಮುದಾಯ ಯುವತಿಯರು ಹಾಗೂ ಮಹಿಳೆಯರು ಪ್ರಧಾನಿ ಮೋದಿ ಅವರಿಗೆ ತಾವಿರುವ ಸ್ಥಳದಿಂದಲೇ ಪುಷ್ಪಾರ್ಚನೆ ಕೈಗೊಂಡು ಅದ್ಧೂರಿಯಾಗಿ ಸ್ವಾಗಸಿದರು. ಇದೇ ವೇಳೆ, ರೋಡ್ ಶೋ ಉದ್ದಕ್ಕೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಮಂತ್ರಿಸಲ್ಪಟ್ಟಿದ್ದ ಕಲಾವಿದರು ಡೊಳ್ಳು ಕುಣಿತ ಕೈಗೊಂಡು ರೋಡ್ ಶೋ ಆಕರ್ಷಣೆ ಇಮ್ಮಡಿಗೊಳಿಸಿದರು.

ಮತ್ತೊಂದೆಡೆ, ಸಂಜೆಯ ಬಳಿಕ ಕತ್ತಲು ಆವರಿಸುತ್ತಿದ್ದಂತೆಯೇ ರಸ್ತೆಯುದ್ದಕ್ಕೂ ಅಳವಡಿಸಲಾಗಿದ್ದ ಬಣ್ಣಬಣ್ಣ ವಿದ್ಯುದ್ದೀಪಗಳು ಝಗಮಗಿಸಿದವು. ಜೊತೆಗೆ, ರಸ್ತೆಯುದ್ದಕ್ಕೂ ಶ್ರೀರಾಮ, ಸ್ವಾಮಿ ವಿವೇಕಾನಂದರ ಉಡುಗೆಯಲ್ಲಿದ್ದ ನೂರಾರು ಮಕ್ಕಳು ಪ್ರಧಾನಿಯತ್ತ ಕೈ ಬೀಸಿ ತಮ್ಮ ಸಂತಸ ಹಂಚಿಕೊಂಡರು.


ಮಕ್ಕಳೊಂದಿಗೆ ಮೋದಿ ಸಂವಾದ

ರಾಯಚೂರಿನ ಸಿಂಧನೂರಿನಲ್ಲಿ ರೋಡ್ ಮುಗಿಸಿಕೊಂಡು ಕಲಬುರಗಿಯ ಪೊಲೀಸ್ ಪರೇಡ್ ಮೈದಾನಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ತೀವ್ರ ಭದ್ರತೆಯಲ್ಲಿ ಹುಮನಾಬಾದ್ ರಸ್ತೆ ಕಡೆಗೆ ಪ್ರಯಾಣಿಸುವುದಕ್ಕೂ ಮುನ್ನ ರಸ್ತೆ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿಯ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಸಂವಾದ ನಡೆಸಿದರು.

ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ ಮುಗುಳ್ನಗೆಯೊಂದಿಗೆ ಒಬ್ಬ ಬಾಲಕನನ್ನು ಕುರಿತು ‘ಮುಂದೆ ನೀನು ಏನಾಗುವೆ? ಎಂದಾಗ, ಆತ ನಾನು ಪೊಲೀಸ್ ಆಗುವೆ ಎಂದು ಮುಗ್ಧವಾಗಿ ಪ್ರತಿಕ್ರಿಯಿಸಿದ. ಮತ್ತೊಬ್ಬ ಬಾಲಕ ತಾವು ಡಾಕ್ಟರ್ ಆಗುವುದಾಗಿ ಹೇಳುತ್ತಿದ್ದಂತೆಯೇ, ಗುಂಪಿನಲ್ಲಿದ್ದ ಒಬ್ಬ ಬಾಲಕ ‘ನಾನು ನಿಮ್ಮ ಬಾಡಿಗಾರ್ಡ್ ಆಗುತ್ತೇನೆ’ ಎಂದಾಗ ಮೋದಿ ಬಾಲಕನ ಮುಗ್ಧತೆಗೆ ಮೆಚ್ಚುಗೆ ಸೂಚಿಸಿ ಮುಗುಳ್ನಕ್ಕರು.

ಈ ಮಧ್ಯೆ, ‘ನಿಮ್ಮಲ್ಲಿ ಯಾರೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗೋದಿಲ್ಲವೇ?’ ಎಂದಾಗ, ಮಕ್ಕಳೆಲ್ಲಾ ಮುಗ್ಧರಾಗಿ ಸುಮ್ಮನೆ ನಿಂತರು. ಅಲ್ಲಿಂದ ಪ್ರಧಾನಿ ಹುಮನಾಬಾದ್ ರಸ್ತೆ ಕಡೆಗೆ ಪ್ರಯಾಣ ಬೆಳೆಸಿದರು.