
ಬೆಂಗಳೂರು,ಮೇ.೫-ಪ್ರಧಾನಿ ನರೇಂದ್ರಮೋದಿ ಅವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಪಕ್ಷ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಶೋಭಾಕರಂದ್ಲಾಜೆ ಆರೋಪಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಅವರದೇ ಕಾರ್ಯಕರ್ತರ ಆಂಬ್ಯುಲೆನ್ಸ್‌ಗಳನ್ನು ರೋಡ್ ಶೋ ಮಾರ್ಗಗಳಲ್ಲಿ ಓಡಿಸುವ ಹುನ್ನಾರ ನಡೆಸಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ಎಲ್ಲವನ್ನೂ ತರಲಾಗಿದ್ದು, ಆಂಬ್ಯುಲೆನ್ಸ್‌ನಲ್ಲಿ ರೋಗಿಗಳಿದ್ದಾರಾ ಎಂಬುದನ್ನು ಪರೀಕ್ಷಿಸಿ ರೋಗಿಗಳಿರುವ ಆಂಬ್ಯುಲೆನ್ಸ್‌ಗಳನ್ನು ಪೊಲೀಸರೇ ಖುದ್ದು ಆಸ್ಪತ್ರೆವರೆಗೆ ಬಿಡುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಭಾನುವಾರ ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲು ಪ್ರಧಾನಿ ನರೇಂದ್ರಮೋದಿಯವರೇ ಸೂಚಿಸಿದ್ದಾರೆ. ಅದರಂತೆ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.
ಭಾನುವಾರ ಯಾವುದೇ ವಿದ್ಯಾರ್ಥೀಗಳು ತೊಂದರೆಗೆ ಸಿಲುಕದಂತೆ ಗಮನ ಹರಿಸಿದ್ದೇವೆ. ಒಂದು ವೇಳೆ ವಿದ್ಯಾರ್ಥಿಗಳಯ ತೊಂದರೆಗೆ ಸಿಲುಕಿದ್ದರೆ ಅಂತಹ ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿದರೆ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪೊಲೀಸರು ಬಿಡುತ್ತಾರೆ. ಈ ಬಗ್ಗೆ ಪೊಲೀಸರೊಂದೊಗೆ, ಎಸ್ಪಿಜಿ ಅವರುಗಳೊಂದಿಗೂ ಚರ್ಚೆ ನಡೆಸಿದ್ದೇವೆ.