
ಬೆಂಗಳೂರು,ಫೆ.೨೬:ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಾಗಲೇ ಪ್ರಧಾನಿ ಮೋದಿ ಅವರ ರಾಜ್ಯ ಭೇಟಿಗಳು ಹೆಚ್ಚಾಗುತ್ತಿದ್ದು, ನಾಳೆ ಪ್ರಧಾನಿ ಮೋದಿ ಅವರು ಮಲೆನಾಡಿನ ಹೆಬ್ಬಾಗಿಲಾಗಿರುವ ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ಶಕ್ತಿಪ್ರದರ್ಶನಕ್ಕೆ ವೇದಿಕೆ ಅಣಿಯಾಗಿದೆ.
ಪ್ರಧಾನಿ ಮೋದಿ ಅವರು ಕಳೆದ ಒಂದು ತಿಂಗಳಲ್ಲಿ ಹಲವಾರು ಭಾರಿ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸಮಾವೇಶಗಳಲ್ಲಿ ಭಾಗಿಯಾಗುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದಾರೆ.
ನಾಳೆ ಅವರು ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಜತೆ ಭಾಗಿಯಾಗುವರು.
ಪ್ರಧಾನಿ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿರುವುದು ಮಲೆನಾಡು ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದು, ಮೋದಿ ಅವರ ಅದ್ಧೂರಿ ಸ್ವಾಗತಕ್ಕೆ ಎಲ್ಲ ರೀತಿಯ ತಯಾರಿ ಹಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಮಾನನಿಲ್ದಾಣ ನಿರ್ಮಾಣ ಕ್ಷಿಪ್ರಗತಿಯಲ್ಲಿ ಉದ್ಘಾಟನೆಯಾಗುತ್ತಿದ್ದು, ಮೋದಿ ಅವರ ಸ್ವಾಗತಕ್ಕೆ ಖುದ್ದು ಯಡಿಯೂರಪ್ಪರವರೇ ನೇತೃತ್ವ ವಹಿಸಿ ’ನ ಭೂತೋ ನಾ ಭವಿಷ್ಯತಿ’ ಎಂಬ ರೀತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಆಸ್ಥೆ ವಹಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಮಲೆನಾಡು ಭಾಗದ ಜಿಲ್ಲೆಗಳಿಂದ ಹೆಚ್ಚು ಜನರನ್ನು ಸೇರಿಸುವ ಮೂಲಕ ಬಿಜೆಪಿಯ ಶಕ್ತಿಪ್ರದರ್ಶನವು ನಾಳೆ ನಡೆಯಲಿದೆ. ಪ್ರಧಾನಿ ಮೋದಿ ಅವರು ನಾಳೆ ದೆಹಲಿಯಿಂದ ಶಿವಮೊಗ್ಗಕ್ಕೆ ಆಗಮಿಸಿ ನಾಳೆ ಬೆಳಿಗ್ಗೆ ೧೧ ಗಂಟೆಗೆ ವಿಮಾನನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುವರು.
ಬೆಳಗಾವಿಯಲ್ಲಿ ಸಮಾವೇಶ
ಶಿವಮೊಗ್ಗ ಸಮಾವೇಶದ ನಂತರ ಪ್ರಧಾನಿ ಮೋದಿ ಅವರು ಬೆಳಗಾವಿಯಲ್ಲಿ ಜಲಜೀವನ್ ಮಿಷನ್‌ನ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವರು. ಇದಾದ ನಂತರ ಪ್ರಧಾನಿಗಳು ಬೆಳಗಾವಿಯಲ್ಲಿ ರೋಡ್ ಶೋ ನಡೆಸುವರು.