ಮೋದಿ ರಾಜ್ಯ ಪ್ರವಾಸ ಪಕ್ಷಕ್ಕೆ,ಕಾರ್ಯಕರ್ತರಿಗೆ ಬಲ

ಹೊಸಕೋಟೆ,ಮಾ.೩-ಚುನಾವಣೆ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ನಾಯಕರುಗಳು ರಾಜ್ಯ ಪ್ರವಾಸವನ್ನು ನಿರಂತರವಾಗಿ ಕೈಗೊಳ್ಳುತ್ತಿರುವುದು ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಗ್ರಾಪಂ ವ್ಯಾಪ್ತಿಯ ಲಿಂಗಧೀರ ಮಲ್ಲಸಂದ್ರ, ಮೇಡಹಳ್ಳಿ, ಡಿ.ಹೊಸಹಳ್ಳಿ, ದೇವಲಾಪುರ, ದೊಡ್ಡ ದುನ್ನಸಂದ್ರ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶಿವಮೊಗ್ಗದಲ್ಲಿ ವಿಮಾನ ನಿಲ್ಧಾಣ ಲೋಕಾರ್ಪಣೆ ಹಾಗೂ, ಬೆಳಗಾವಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಮುಂದಿನ ಚುನಾವಣೆಗೆ ಕಾರ್ಯಕರ್ತರಿಗೆ ಈ ಪ್ರವಾಸ ಶಕ್ತಿ ತುಂಬಿದಂತೆ ಆಗುತ್ತಿದೆ. ಅಭಿವೃದ್ದಿ ವಿಚಾರವಾಗಿ ಕೇಂಧ್ರ ಹಾಗೂ ರಾಜ್ಯ ಸರ್ಕಾರ ಡಬಲ್ ಎಂಜಿನ್ ನಂತೆ ಕೆಲಸ ಮಾಡುತ್ತಿದೆ. ಕ್ಷೇತ್ರದಲ್ಲಿ ವಿಶೇಷ ಅನುದಾನದ ಮೂಲಕ ತಾಲೂಕಿನ ಸಮಗ್ರ ಅಭಿವೃದ್ದಿ ಮಾಡುವ ಕಾರ್ಯವನ್ನು ನಾನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ್ದೇನೆ ಎಂದರು.

ಅನುಗೊಂಡನಹಳ್ಳಿ ಹೋಬಳಿ ಶಕ್ತಿ ಕೇಂಧ್ರದ ಅಧ್ಯಕ್ಷ ಓಬಳಾಪುರ ಮಂಜುನಾಥ್ ಮಾತನಾಡಿ ೨೦೨೩ರ ವಿಧಾನಸಭಾ ಚುನಾವಣೆ ಸಮೀಪದಲ್ಲಿದೆ. ಮತದಾರರು ಸಾಕಷ್ಟು ಪ್ರಬುದ್ದರಾಗಿ ಮತ ಚಲಾವಣೆ ಮಾಡಬೇಕು. ಗ್ರಾಮಗಳಲ್ಲಿ ಮನಸ್ತಾಪ ಬಿಟ್ಟು ಅಭಿವೃದ್ದಿಗೆ ಒತ್ತು ನೀಡುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸಚಿವ ಎಂಟಿಬಿ ನಾಗರಾಜ್ ವಿಶೇಷ ಅನುದಾನದ ಮೂಲಕ ಅಭಿವೃದ್ದಿಯಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಮಾಡಿರುವ ತಪ್ಪನ್ನು ಮತದಾರರು ಮತ್ತೆ ಮಾಡಬಾರದು ಎಂದರು.