ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ನಮ್ಮದು ಅಳಿಲು ಸೇವೆ: ಜಗದೀಶ್ ಶೆಟ್ಟರ್ 

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.30: ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರೇ ಆಯ್ಕೆಯಾಗಬೇಕು. ಯಾವುದೇ ಷರತ್ತು ಇಲ್ಲದೇ ಸೇರ್ಪಡೆ ಆಗಿದ್ದೇನೆ. ಕೇಂದ್ರದ ವರಿಷ್ಠರು ಏನೇ ಸೂಚನೆ ನೀಡಿದರೂ ಅದನ್ನು ಪಾಲಿಸುವೆ. ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕಿದೆ. ಅದರಲ್ಲಿ ನಮ್ಮದು ಅಳಿಲು ಸೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಬಳಿಕ ತವರು ಕ್ಷೇತ್ರ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ದಾವಣಗೆರೆಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೆ ದಾವಣಗೆರೆಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ವಾಪಾಸು ಬಂದಿರುವುದು ನನಗೆ ನಮ್ಮ ಮನೆಗೆ ನಾನು ಮರಳಿ ಬಂದಿರುವ ಖುಷಿಯಾಗಿದೆ. ನಾನು ಬಿಜೆಪಿಗೆ ಮರಳುವುದು ಈಗಿನ ಪ್ರಯತ್ನವಲ್ಲ. ಕಳೆದ ಐದಾರು ತಿಂಗಳಿಂದ ನಡೆದಿತ್ತು. ನಮ್ಮ ಕ್ಷೇತ್ರದ ಕಾರ್ಯಕರ್ತರ ಒತ್ತಡ, ಕೇಂದ್ರದ ವರಿಷ್ಠರ ಒತ್ತಡದ ಹಿನ್ನೆಲೆಯಲ್ಲಿ ಬಿಜೆಪ ಸೇರ್ಪಡೆ ಆಗಿದ್ದೇನೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು ಎನ್ನುವುದು ಮುಖ್ಯ ಗುರಿಯಾಗಿದೆ ಎಂದರು.ಕಳೆದ 10 ವರ್ಷಗಳಿಂದ ಸುಭದ್ರ ಸರ್ಕಾರ ನೀಡುವ ಮೂಲಕ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯತ್ತಿದ್ದಾರೆ. ದೇಶದ ಉನ್ನತಿಗೆ ಶ್ರಮಿಸಿದ್ಧಾರೆ. ಇದಲ್ಲದೇ ದೇಶ ಸುಭದ್ರತೆ, ಅಭಿವೃದ್ದಿ ಕಾರಣಕ್ಕೆ ನಾವೆಲ್ಲ ಬಿಜೆಪಿಗೆ ಕೈ ಜೋಡಿಸಿದ್ದೇವೆ. ಆ ಮೂಲಕ ಮೋದಿ ಕೈ ಬಲಪಡಿಸಬೇಕಿದೆ. ಈ ಹಿನ್ನಲೆಯಲ್ಲಿ ನಾನು ಬಿಜೆಪಿಗೆ ಮರಳಿರುವೆ. ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಪಕ್ಷವನ್ನು ಸದೃಢ ಮಾಡಲಾಗುವುದು ಎಂದು ಹೇಳಿದರು.