ಮೋದಿ ಭೇಟಿ ಬಿಗಿ ಭದ್ರತೆ

ಮಂಡ್ಯ,ಮಾ.೧೦-ಇದೇ ಮಾರ್ಚ್ ೧೨ ರಂದು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ೨೪೦೦ ಪೊಲೀಸರನ್ನು ನಿಯೋಜನೆ ಮಾಡಿ ಅಭೂತಪೂರ್ವ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಅವರಿಂದ ಮಾರ್ಚ್ ೧೨ ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ ಹಿನ್ನೆಲೆ ಮಂಡ್ಯದಿಂದ ಗೆಜ್ಜಲಗರೆ ಸಮಾವೇಶದವರೆಗೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.
ಮೈಸೂರು, ಚಾಮರಾಜನಗರ,ಕೊಡಗು ಹಾಸನ ಪೊಲೀಸರನ್ನು ನಿಯೋಜಿಸಲಾಗಿದೆ.
ನಗರದ ಐಬಿ ಸರ್ಕಲ್ ನಿಂದ ನಂದ ಟಾಕೀಸ್ ವರೆಗೆ ರೋಡ್ ಶೋ ನಡೆಯಲಿದ್ದು ಅಮರಾವತಿ ಹೋಟೆಲ್ ಬಳಿ ಪ್ರಧಾನಿ ಮೋದಿ ರಸ್ತೆ ವೀಕ್ಷಣೆ ಮಾಡಲಿದ್ದಾರೆ. ಅಧಿಕೃತ ಪ್ರವಾಸ ವಿವರ ಬರುವವರೆಗೂ ಏನು ಹೇಳಲು ಆಗಲ್ಲ ಎಂದು ಎಸ್ಪಿ ಯತೀಶ್ ತಿಳಿಸಿದರು.
ಪರ್ಯಾಯ ಮಾರ್ಗ:
ಪ್ರಧಾನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮದ್ದೂರು/ಮಂಡ್ಯ ವ್ಯಾಪ್ತಿಯಲ್ಲಿ ಲಕ್ಷಾಂತರ ಜನರು, ಬಿಜೆಪಿ ಕಾಯಕರ್ತರು ಸೇರಲಿದ್ದಾರೆ. ಈ ಕಾರಣಕ್ಕೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಮಾರ್ಚ್ ೧೨ರಂದು ಪರ್ಯಾಯ ಮಾರ್ಗಗಳನ್ನು ಕಲ್ಪಿಸಿದ್ದಾರೆ.ಮೈಸೂರು ನಗರದಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿರುವ ಎಲ್ಲ ವಿಧದ ವಾಹನಗಳು ಮೈಸೂರು- ಬನ್ನೂರು ಮಾರ್ಗವಾಗಿ ಕಿರುಗಾವಲು ಅಲ್ಲಿಂದ ಮಳವಳ್ಳಿ- ಹಲಗೂರು- ಕನಕಪುರ ಹಾದು ಬೆಂಗಳೂರು ತಲಪಬೇಕು.ಮೈಸೂರು ನಗರದಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಬರುವವರು ಮೈಸೂರು- ಶ್ರೀರಂಗಪಟ್ಟಣ- ಪಾಂಡವಪುರ- ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಬರಬಹುದು.ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಬರುವವ ಎಲ್ಲ ವಾಹನ ಸವಾರರು, ತುಮಕೂರಿನಿಂದ ಬೆಳ್ಳೂರು ಕ್ರಾಸ್-ನಾಗಮಂಗಲ-ಪಾಂಡವಪುರ- ಶ್ರೀರಂಗಪಟ್ಟಣ- ಮೈಸೂರು ಮಾರ್ಗವಾಗಿ ಸಂಚರಿಸುವಂತೆ ಪೊಲೀಸರು ಕೋರಿದ್ದಾರೆ.ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಓಡಾವವರು ಮಾ. ೧೨ರಂದು ಬೆಂಗಳೂರು-ಚನ್ನಪಟ್ಟಣ-ಹಲಗೂರು-ಮಳವಳ್ಳಿ-ಕಿರುಗಾವಲು- ಬನ್ನೂರು- ಮೈಸೂರು- ಮಾರ್ಗವಾಗಿ ಸಂಚರಿಸಲು ಅನುವು ಮಾಡಲಾಗಿದೆ.ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ – ಮಹದೇಶ್ವರ ಬೆಟ್ಟಕ್ಕೆ ತೆರಳುವವ ಎಲ್ಲ ರೀತಿಯ ವಾಹನ ಸವಾರರು ಬೆಂಗಳೂರಿನಿಂದ ಚನ್ನಪಟ್ಟಣ- ಹಲಗೂರು- ಮಳ್ಳವಳ್ಳಿ- ಕೊಳ್ಳೇಗಾಲ-ಮಹದೇವಶ್ವರ ಬೆಟ್ಟ ಮಾರ್ಗವಾಗಿ ಸಂಚರಿಸಲು ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.