ಮೋದಿ ಭೇಟಿ ಕರಾವಳಿ ಆರ್ಥಿಕ ಬೆಳವಣಿಗೆಗೆ ಶಕ್ತಿ

ಬೆಂಗಳೂರು, ಸೆ. ೨- ಕರಾವಳಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಶಕ್ತಿಯನ್ನು ತುಂಬಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಂಗಳೂರಿಗೆ ಪ್ರಧಾನಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕಾಗಿ ಬೆಳಿಗ್ಗೆಯೇ ಮಂಗಳೂರಿಗೆ ತೆರಳಿದ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಬಹಳ ದಿನಗಳ ನಂತರ ಕರ್ನಾಟಕದ ಕರಾವಳಿ ಭಾಗಕ್ಕೆ ಬರುತ್ತಿದ್ದಾರೆ. ಬರುವಾಗ ಕರಾವಳಿಯ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುವ ಯೋಜನೆಗಳಿಗೆ ಮಂಜೂರಾತಿ ನೀಡಲಿದ್ದಾರೆ ಎಂದರು.
ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿರುವ ೩೮೦೦ ಕೋಟಿ ರೂ.ಗಳ ಯೋಜನೆಗಳನ್ನು ಪ್ರಧಾನಿಗಳು ಇಂದು ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ ಎಂದರು.
ಈ ಯೋಜನೆಗಳು ಕರಾವಳಿ ಭಾಗದ ಆರ್ಥಿಕ ಚಟುವಟಿಕೆ ಮತ್ತು ಬಂದರುಗಳ ಸಾಮರ್ಥ್ಯ ಹಾಗೂ ವ್ಯವಹಾರಗಳನ್ನು ಹೆಚ್ಚಿಸುವ ಉದ್ಯೋಗವನ್ನು ಸೃಷ್ಠಿಸುವ ಯೋಜನೆಗಳಾಗಿವೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ರಾಜ್ಯಕ್ಕೆ ೧೦೦ ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಮಂಜೂರು ಮಾಡಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಕಾರ್ಡ್ ವಿತರಣೆಯನ್ನು ಮಾಡಿದ್ದಾರೆ ಎಂದರು.
ಕೇಂದ್ರದ ಕಲ್ಯಾಣ ಯೋಜನೆಗಳ ಜತೆಗೆ ರಾಜ್ಯ ಸರ್ಕಾರವೂ ಮೀನುಗಾರರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಎಲ್ಲ ಯೋಜನೆಗಳಿಗೂ ಪ್ರಧಾನಿಗಳೇ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.