ಮೋದಿ ಭರ್ಜರಿ ರೋಡ್ ಶೋ

ಸಂಪೂರ್ಣ ಕೇಸರಿಮಯ
ಬೆಂಗಳೂರು,ಮೇ೬:ವಿಧಾನಸಭಾ ಚುನಾವಣೆಗೆ ಇನ್ನು ೪ ದಿನಗಳಷ್ಟೇ ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿಂದು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಸಂಭ್ರಮ-ಸಡಗರ, ರೋಮಾಂಚನ ಮೂಡಿಸಿ ಬಿಜೆಪಿ ಪರವಾದ ಅಲೆ ಎಬ್ಬಿಸುವ ಪ್ರಯತ್ನಗಳಿಗೆ ಶಕ್ತಿ ತುಂಬಿದರು. ಬೆಂಗಳೂರಿನಲ್ಲಿ ಇಂದು ನಡೆದ ಮೋದಿ ಅವರ ರೋಡ್ ಶೋ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಡೆಸಿದ ಈ ರೋಡ್ ಶೋ, ಚುನಾವಣಾ ಕಣ ರಂಗೇರುವಂತೆ ಮಾಡಿದ್ದು, ಸುಮಾರು ೨೬ ಕಿ.ಮೀ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಅವರು ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲು ಹುರುಪು ತುಂಬಿದರು. ರೋಡ್ ಶೋನಲ್ಲಿ ಪ್ರಧಾನಿ ಮೋದಿ ಅವರು ಜನರತ್ತ ಕೈಮುಗಿದು, ಕೈ ಬೀಸುತ್ತ ಸಾಗಿದ್ದು ಜನ ಸಹ ಮೋದಿ ಅವರಿಗೆ ಸ್ಪಂದಿಸಿ ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
ಪುಷ್ಪವೃಷ್ಠಿ
ಪ್ರಧಾನಿ ಮೋದಿ ಅವರ ರೋಡ್ ಶೋ ಉದ್ದಕ್ಕೂ ಹೂವಿನ ಸುರಿಮಳೆಗೈದರು, ಅವರತ್ತ ಜನ ಹೂವನ್ನು ಎಸೆದು ಸಂಭ್ರಮಿಸಿ ಜೈಜೈ ಮೋದಿ ಎಂಬ ಜೈಕಾರದ ಘೋಷಣೆಗಳನ್ನು ಕೂಗಿದರು. ಭಾರತ್ ಮಾತಾ ಕೀ ಜೈ, ಬಿಜೆಪಿಗೆ ಜೈ, ಜೈ ಬಜರಂಗಬಲಿ ಘೋಷಣೆಗಳು ಮುಗಿಲು ಮುಟ್ಟಿದ್ದವು.
ರೋಡ್ ಶೋನಲ್ಲಿ ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಿ ಗಮನ ಸೆಳೆದವು.
ಸೌತ್ ಎಂಡ್ ವೃತ್ತದ ಬಳಿ ಯುವ ಜೋಡಿಯೊಂದು ಮೋದಿ ಜೀ ನಮ್ಮ ಮದುವೆಗೆ ಬರಬೇಕು ಎಂಬ ಬ್ಯಾನರ್ ಹಿಡಿದಿದ್ದು ವಿಶೇಷವಾಗಿತ್ತು.
ರಾಜ್ಯ ವಿಧಾನಸಭೆಗೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕರ್ನಾಟಕದತ್ತ ಚಿತ್ತ ನೆಟ್ಟಿರುವ ಪ್ರಧಾನಿ ಮೋದಿ ಅವರು, ಮತದಾರರನ್ನು ಓಲೈಸಲು ರಾಜ್ಯದಲ್ಲಿ ನಿನ್ನೆಯಿಂದಲೇ ಬಿರುಸಿನ ಪ್ರಚಾರ ನಡೆಸಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗಿಯಾಗುತ್ತಿದ್ದು, ಇಂದು ಅವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬೃಹತ್ ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ನಾಳೆಯೂ ಅವರು ಬೆಂಗಳೂರಿನ ಕೇಂದ್ರ ಭಾಗದಲ್ಲಿ ರೋಡ್ ಶೋ ನಡೆಸುವರು.
ಈ ಚುನಾವಣೆಗೆ ಈ ಬಾರಿ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಘೋಷಣೆಯೊಂದಿಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಅವರ ರೋಡ್ ಶೋಗೆ ರಸ್ತೆಯ ಇಕ್ಕೆಲಗಳಲ್ಲೂ ಭಾರಿ ಜನಸ್ತೋಮ ನೆರೆದಿತ್ತು.

ವಿಧಾನಸಭಾ ಚುನಾವಣೆಗೆ ಕೊನೆ ಹಂತದ ಪ್ರಚಾರ ಮತ್ತಷ್ಟು ಬಿರುಸುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆ.ಪಿ.ನಗರದ ಸೋಮೇಶ್ವರ ಸಭಾ ಭವನದಿಂದ ಭರ್ಜರಿ ರೋಡ್ ಶೋ ನಡೆಸಿ ನೆರೆದಿದ್ದ ಜನಸ್ತೋಮಕ್ಕೆ ಕೈ ಬೀಸಿದರು. ಸಂಸದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಇದ್ದಾರೆ.

ಎಲ್ಲೆಡೆ ಮೋದಿ ಮೋದಿ ಘೋಷಣೆ-ಜೈಕಾರ
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ, ಜೆಪಿ ನಗರದ ಸೋಮೇಶ್ವರ ಭವನದಿಂದ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಯಿತು. ರೋಡ್ ಶೋ ಆರಂಭದಲ್ಲಿ ಬೆಂಗಳೂರಿನ ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿಗರ ಪರವಾಗಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.
ಮೋದಿ ಅವರ ರೋಡ್ ಶೋನಲ್ಲಿ ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂಂii ಸಹ ಭಾಗಿಯಾದರು. ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಅವರ ರೋಡ್ ಶೋಗೆ ಭಾರಿ ಜನಸ್ತೋಮವೇ ನೆರೆದಿದ್ದು, ಮೋದಿ ಮೋದಿ ಜೈಕಾರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಂಭ್ರಮಿಸಿ ಮೋದಿ ಅವರನ್ನು ಸ್ವಾಗತಿಸಿದರು. ರೋಡ್ ಶೋನಲ್ಲಿ ಕಾರ್ಯಕರ್ತರ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು.
ರೋಡ್ ಶೋ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ಬಿಜೆಪಿಯ ಕೇಸರಿ ಧ್ವಜಗಳನ್ನು ಹಾಕಲಾಗಿದ್ದು, ಎಲ್ಲ ರಸ್ತೆಗಳು ಕೇಸರಿಮಯವಾಗಿದ್ದವು. ವ್ಯಕ್ತಿಯೊಬ್ಬರು ಆಂಜನೇಯ ವೇಷಧಾರಿಯಾಗಿ ಭಾಗವಹಿಸಿದ್ದು ಗಮನ ಸೆಳೆಯಿತು.

ಜೆಪಿ ನಗರದ ಸೋಮೇಶ್ವರ ದೇವಾಲಯದಿಂದ ಆರಂಭವಾದ ರೋಡ್ ಶೋ, ಸೌತ್ ಎಂಡ್ ವೃತ್ತ, ಆರ್ಮುಗಂ ಸರ್ಕಲ್, ಬಸವನಗುಡಿ ರಸ್ತೆ, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಚಾಮರಾಜನಗರ ಮುಖ್ಯರಸ್ತೆ, ಮಾಗಡಿ ರಸ್ತೆ, ಚೋಳೂರು ಪಾಳ್ಯ, ವೆಸ್ಟ್‌ಆಫ್‌ಕಾರ್ಡ್ ರೋಡ್, ಎಂಸಿ ಲೇಔಟ್, ಬಿಜಿಎಸ್ ಮೈದಾನ ರಸ್ತೆ, ನಾಗರಭಾವಿ ಮುಖ್ಯರಸ್ತೆ, ಗೋವಿಂದರಾಜನಗರ ಮೂಲಕ ಬಸವೇಶ್ವರ ನಗರ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆಯ ಮೂಲಕ ಸಾಗಿ ಮಲ್ಲೇಶ್ವರದ ಗಂಗಮ್ಮಗುಡಿಯ ಸರ್ಕಲ್‌ನಲ್ಲಿ ಸಂಪೂರ್ಣಗೊಂಡಿತು.