ಕೋಲಾರ, ಜೂ. ೨೭-ಹಿಂದೆ ಅಧಿಕಾರ ನಡೆಸಿದ್ದ ಸಂದರ್ಭದಲ್ಲಿ ಲೂಟಿ ಮಾಡಿರುವ ಲಕ್ಷಾಂತರ ಕೋಟಿ ಹಣವಿದ್ದರೆ ಇಟಲಿ ಮೇಡಂ, ರಾಹುಲ್‌ಬಳಿ ಹೋಗಿ ತಂದು ಜನರಿಗೆ ನೀಡಿ ಗ್ಯಾರಂಟಿ ಜಾರಿಗೆ ತರಲಿ ಅದು ಬಿಟ್ಟು ಮೋದಿ ಬಗ್ಗೆ ಏಕೆ ಆರೋಪ ಮಾಡುತ್ತೀರಿ, ಪ್ರಧಾನಿಯನ್ನು ಕೇಳಿ ಭರವಸೆ ಕೊಟ್ಟಿರಾ? ಎಂದು ಕಾಂಗ್ರೆಸ್ ಮುಖಂಡರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಜಾರಿಗೆ ಯೋಗ್ಯತೆ ಇಲ್ಲದ ಮೇಲೆ ಏಕೆ ಘೋಷಿಸಬೇಕಿತ್ತು ಎಂದು ಪ್ರಶ್ನಿಸಿದ ಅವರು, ಜನರಿಗೆ ವಂಚನೆಯಾಗುವುದನ್ನು ತಪ್ಪಿಸಿ ಪ್ರತಿ ನಾಗರೀಕರಿಗೂ ಗ್ಯಾರಂಟಿ ತಲುಪುವಂತೆ ಮಾಡಬೇಕು ಎಂದು ತಾಕೀತು ಮಾಡಿ, ಚುನಾವಣೆಗೆ ಇಲ್ಲದ ಖಂಡೀಷನ್ಸ್ ಈಗ ಏಕೆ ಎಂದು ಪ್ರಶ್ನಿಸಿದರು.
ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇವರು ೨೭ ವರ್ಷ ಸಂಸದರಾಗಿ ಕೋಲರಕ್ಕೆ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.
ಮಹ್ಮದ್ ಫೈಸ್‌ಖಾನ್‌ರಂತಹ ಮುಸ್ಲಿಮರು ಗೋಹತ್ಯೆ ವಿರೋಧಿಸಿ ಪ್ರಚಾರ ನಡೆಸುತ್ತಿದ್ದಾರೆ, ನಮ್ಮ ದೇಶದಲ್ಲಿನ ಮುಸ್ಲಿಮರು, ಕ್ರಿಶ್ಚಿಯನ್ನರು ಮೂಲತಃ ಹಿಂದೂಗಳೇ ಅವರ್‍ಯಾರು ಇಂಗ್ಲೆಂಡ್ ಅಥವಾ ದುಬೈನಿಂದ ಬಂದರವಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಅನೇಕ ಸುಳ್ಳು ಗ್ಯಾರಂಟಿ ನೀಡಿದೆ, ಹೆತ್ತ ಮಗುವಿಗೆ, ಬದುಕಿನುದ್ದಕ್ಕೂ ಅಮೃತವಾದ ಹಾಲು ನೀಡುವ ಗೋಮಾತೆ ಇಂದು ನನ್ನ ಬದುಕಿಗೆ ಗ್ಯಾರೆಂಟಿ ಕೇಳುವಂತಾಗಿದೆ ಎಂದು ವಿಷಾದಿಸಿ, ಗೋಹತ್ಯಾ, ಮತಾಂತರ ನಿಷೇಧ ವಾಪಸ್ಸು ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದ ಅವರು ಕಾಂಗ್ರೆಸ್‌ನ ಜನವಿರೋಧಿ ಚಟುವಟಿಕೆಗಳ ವಿರುದ್ದ ಒಗ್ಗೂಡಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹುದ್ದೆ ಖಾಲಿ ಇಲ್ಲ, ಸಮಯ ಬಂದಾಗ ಪಕ್ಷಕ್ಕೆ ಹೈಕಮಾಂಡ್ ಇದೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ ಎಂದರು.