ಮೋದಿ ಪ್ರಧಾನಿಯಾದ ನಂತರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ-ಲಕ್ಷ್ಮೀವೆಂಕಟೇಶ್

ಕೋಲಾರ,ಏ,೩-ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿರುವ ಕ್ರಮ ಖಂಡಿಸಲು ಕಾಂಗ್ರೆಸ್ ಪಕ್ಷ ನೇತೃತ್ವದಲ್ಲಿ ಏ.೯ರಂದು ನಡೆಯಲಿರುವ ಜೈ ಭಾರತ್ ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಐ.ಎನ್.ಟಿ.ಯು.ಸಿ ರಾಜ್ಯ ಮತ್ತು ಜಿಲ್ಲಾ ಸಮಿತಿಗಳು ಮುಂದಾಗಬೇಕು ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಕ್ಷ್ಮೀವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ಜೈ ಭಾರತ್ ಸಮಾವೇಶದ ಕುರಿತಂತೆ ಪೂರ್ವಭಾವಿ ಸಭೆ ಹಾಗೂ ಐ.ಎನ್.ಟಿ.ಯು.ಸಿ ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರದಿಂದಲೂ ವಿರೋಧ ಪಕ್ಷಗಳನ್ನು ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು ಜನರು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮನಸ್ಸು ಮಾಡಿದ್ದಾರೆ, ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಜೈ ಭಾರತ್ ಸಮಾವೇಶದಲ್ಲಿ ಭಾಗವಹಿಸುವಂತೆ ಕಾರ್ಮಿಕ ಘಟಕವು ಮಾಡಬೇಕು ಎಂದರು.
ಹಿಂದೆ ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಕೊಟ್ಟ ಆಶ್ವಾಸನೆಗಳಲ್ಲಿ ಒಂದನ್ನಾದರೂ ಜಾರಿ ಮಾಡಿದ್ದಾರಾ ಯುವಕರಿಗೆ ೨ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಸ್ವಿಸ್ ಬ್ಯಾಂಕ್ ಹಣ ವಾಪಸ್ಸು ತರತ್ತೇವೆ, ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಮೋಸ ಮಾಡಿದೆ. ಆದರೆ, ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯುವ ಪಕ್ಷ. ಮುಂಬರುವ ಚುನಾವಣೆಯಲ್ಲಿ ಪ್ರತಿಯೊಂದು ವರ್ಗದ ಹಿತ ಕಾಪಾಡುವ ಸಲುವಾಗಿ ಕಾಂಗ್ರೆಸ್ ಉತ್ತಮ ಕೊಡುಗೆ ನೀಡಲಿದ್ದು ಈ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲಲಿದೆ ರಾಹುಲ್ ಗಾಂಧಿ ಸದಸ್ಯತ್ವ ರದ್ದು ಮಾಡಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆದರಿಸಲು ಮೋದಿ ಮತ್ತು ಅವರ ತಂಡದಿಂದ ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಕಾರ್ಮಿಕ ಘಟಕವು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡಿದೆ ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸ್ಪರ್ಧೆ ಮಾಡಲು ಅವಕಾಶವಿಲ್ಲದೇ ಹೋದರೆ ಐ.ಎನ್.ಟಿ.ಯು.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ಅವರಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.
ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ, ಐ.ಎನ್.ಟಿ.ಯು.ಸಿ ರಾಜ್ಯ ಕಾರ್ಯಾಧ್ಯಕ್ಷ ಶ್ಯಾಮಣ್ಣರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವೆಂಕಟಪತಪ್ಪ, ಯುವ ಘಟಕದ ಅಧ್ಯಕ್ಷ ವರುಣ್, ಕಾರ್ಯದರ್ಶಿ ಮಹಮದ್ ಆಲಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲಪ್ಪ, ಖಜಾಂಚಿ ರಾಜಣ್ಣ, ತಾಲೂಕು ಅಧ್ಯಕ್ಷ ಕೊಡಿಯಪ್ಪ, ಮುಖಂಡರಾದ ಚಂದ್ರಪ್ಪ, ಚಲಪತಿ, ಸರಿತಮ್ಮ, ರಾಜಣ್ಣ, ಚಂದ್ರಪ್ಪ, ಲಕ್ಷ್ಮೀಕಾಂತಮ್ಮ, ಸರಸ್ವತಿ, ಲಕ್ಷ್ಮಮ್ಮ, ಯಲ್ಲಮ್ಮ, ಶಿವಣ್ಣ, ನಾಗರಾಜ್ ಇದ್ದರು.

.