ಮೋದಿ ನೇತೃತ್ವದಲ್ಲೆ ಚುನಾವಣೆ- ಶಾ

ನವದೆಹಲಿ/ ಪಾಟ್ನಾ,ಆ.೧- ದೇಶಲ್ಲಿ ೨೦೨೪ರ ಲೋಕಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಎದುರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.

ಬಿಹಾರದ ಮಿತ್ರ ಪಕ್ಷಗಳು ಸೇರಿದಂತೆ ಬಿಜೆಪಿಯ ಎಲ್ಲಾ ಮೈತ್ರಿ ಪಾಲುದಾರ ಪಕ್ಷಗಳು ಎನ್‌ಡಿಎಯಲ್ಲಿ ಮುಂದುವರಿಯಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಏಳು ರಾಷ್ಟ್ರೀಯ ಮುಂಚೂಣಿ ಸಂಘಟನೆಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು
ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೨೦೧೪ ಮತ್ತು ೨೦೧೯ ರ ಚುನಾವಣೆಗಳಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸಿ ಪ್ರಸಿದ್ಧ ಸ್ಥಳೀಯ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಬೆಳೆಸಿ ಅವರನ್ನು ಪಕ್ಷಕ್ಕೆ ಸೆಳೆಯಿರಿ ಎಂದು ಕಿವಿ ಮಾತು ಹೇಳಿದ್ದಾರೆ.

ಬಿಹಾರದಲ್ಲಿಯೂ ಅಸ್ತಿತ್ವದಲ್ಲಿರುವ ಮೈತ್ರಿಕೂಟದ ೨೦೨೪ರ ಲೋಕಸಭೆ .ಚುನಾವಣೆ ಹಾಗೂ ೨೦೨೫ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.

ಬಿಹಾರದ ಆಡಳಿತ ಮಿತ್ರಪಕ್ಷಗಳಾದ ಜೆಡಿ(ಯು) ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳನ್ನು ಗಮನಿಸಿದರೆ ಅಮಿತ್ ಶಾ ಅವರ ಹೇಳಿಕ ಮಹತ್ವ ಪಡೆದುಕೊಂಡಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾದ ಹಲವಾರು ವಿಷಯಗಳಲ್ಲಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.