ಮೋದಿ ದೊಡ್ಡ ಸಾಲಗಾರ ಪರಿಷತ್‌ನಲ್ಲಿ ಸಿಎಂ ವಾಗ್ದಾಳಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೨೧- ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡ ಜನರ ಬದುಕನ್ನು ದುಸ್ತರ ಮಾಡಿದ ಕೀರ್ತಿ ಪ್ರಧಾನಿ ಮೋದಿ ಅವರದು. ಅವರೊಬ್ಬ ದೊಡ್ಡ ಸಾಲಗಾರ ಎಂದು ಮುಖ್ಯಮಂತ್ರಿ ಸಿದ್ಧಱಾಮಯ್ಯ ವಿಧಾನಪರಿಷತ್‌ನಲ್ಲಿಂದು ನೇರವಾಗಿ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ೨೦೧೪ರ ಮಾರ್ಚ್ ತನಕ ದೇಶದ ಒಟ್ಟು ಸಾಲ ೫೩ ಲಕ್ಷ ೧೧ ಸಾವಿರ ಕೋಟಿ ರೂ.ಗಳಿಷ್ಟಿತ್ತು. ಇವರು ಅಧಿಕಾರಕ್ಕೆ ಬಂದಾಗಿನಿಂದ ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸಾಲ ೧೭೦ ಲಕ್ಷ ಕೋಟಿ ರೂ.ಗಳಿಗೂ ಅಧಿಕವಾಗಿದೆ. ಕಳೆದ ೧೦ ವರ್ಷಗಳ ಪ್ರಧಾನಿ ಮೋದಿ ಅವರ ಅವಧಿಯಲ್ಲಿನ ೧೧೭ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ದೇಶದ ಸಾಲದ ಸುಳಿಗೆ ಸಿಲುಕಲು ಪ್ರಧಾನಿ ಮೋದಿ ನೇರ ಕಾರಣ ಎಂದು ಆರೋಪಿಸಿದರು.
೨೦೨೩-೨೪ನೇ ಸಾಲಿನ ಮುಂಗಡ ಪತ್ರದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದರೆ ರಾಜ್ಯದ ದಿವಾಳಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ದೇಶವನ್ನು ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಬಡಜನರು ಸಮಸ್ಯೆಯಿಂದ ತತ್ತರಿಸುವಂತೆ ಮಾಡಿರುವರು ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ದೂರಿದರು.ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಬಡ ಜನರ ಸಮಸ್ಯೆಗೆ ಕಾರಣರಾಗಿರುವ ಪ್ರಧಾನಿ ಮೋದಿ ಅವರನ್ನು ಬಿಜೆಪಿಯವರು ಹಾಡಿ ಹೊಗಳುತ್ತಾರೆ. ಇದು ಅವರ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.ರಾಜ್ಯದಲ್ಲಿ ೨೦೧೮ರ ತನಕ ರಾಜ್ಯದ ಮೇಲೆ ೨ ಲಕ್ಷ ೪೫ ಸಾವಿರ ಕೋಟಿ ರೂ. ಸಾಲ ಇತ್ತು. ಈ ವರ್ಷದ ಮಾರ್ಚ್ ಅಂತ್ಯದತನಕ ಈ ಸಾಲ ೫ ಲಕ್ಷ ೭೧ ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದರು.೨೦೧೩-೧೮ರವರೆಗೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೫ ವರ್ಷಗಳ ಅವಧಿಯಲ್ಲಿ ೧ ಲಕ್ಷ ೧೬ ಸಾವಿರ ಕೋಟಿ ರೂ. ಸಾಲ ಮಾಡಿದ್ದೆ. ಬಿಜೆಪಿ ಸರ್ಕಾರ ಕಳೆದ ನಾಲ್ಕೈದು ವರ್ಷಗಳಲ್ಲಿ ೨.೩೦ ಲಕ್ಷ ಕೋಟಿ ಸಾಲ ಮಾಡಿದೆ. ತಾವು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಮಾಡಿದ್ದ ಸಾಲಕ್ಕಿಂತ ದುಪ್ಪಟ್ಟು ಸಾಲ ಮಾಡಿದ್ದಾರೆ. ಇದೀಗ ಸಿದ್ಧರಾಮಯ್ಯ ಸಾಲ ಮಾಡಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜ್ಯದ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಬಾರಿಯೂ ಪ್ರಧಾನಿ ಮೋದಿ ಅವರು ಮಾಧ್ಯಮದವರನ್ನು ಭೇಟಿಯಾಗಿಲ್ಲ. ಮಾಧ್ಯಮದವರೂ ಕೂಡಾ ಅವರಿಗೆ ಪ್ರಶ್ನೆ ಕೇಳಲು ಹೋಗಿಲ್ಲ ಎಂದು ಹೇಳಿದರು.
೨೦೧೧-೧೨ ರಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ ೧೨೫.೪೫ ಡಾಲರ್‌ನಷ್ಟಿತ್ತು. ಆಗ ಪ್ರತಿ ಲೀಟರ್ ಡೀಸೆಲ್‌ನ್ನು ೪೦.೯೫ ರೂ.ಗಳಿಗೆ ನೀಡಲಾಗುತ್ತಿತ್ತು. ಇದೀಗ ಡಿಸೇಲ್ ಬೆಲೆ ೮೭.೯೧ ರೂ.ಗೆ ಏರಿಕೆಯಾಗಿದೆ ಎಂದು ದೂರಿದರು.ಪ್ರಸ್ತುತ ೭೯ ಬ್ಯಾರಲ್ ಪ್ರತಿ ಡಾಲರ್‌ಗೆ ಇದೆ. ಈಗ ಪೆಟ್ರೋಲ್ ೧೦೨ ರೂ., ಡಿಸೇಲ್ ೭೮.೭೫ ರೂ. ನಷ್ಟಿದೆ. ಬೆಲೆ ಏರಿಕೆಗೆ ಹಣದುಬ್ಬರ ಹೆಚ್ಚಾಗಲು ಬಡವರ ಬದುಕು ಸಂಕಷ್ಟಕ್ಕೆ ಸಿಲುಕಲು ಪ್ರಧಾನಿಯೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.

ಯೋಗ್ಯತೆ ಇಲ್ಲ
ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಎಂದು ಬಿಜೆಪಿ ನಾಯಕರು ಹಾಡಿ ಹೊಗಳುತ್ತಾರೆ. ಅವರ ಯೋಗ್ಯತೆಗೆ ವಿಧಾನಮಂಡಲದ ಉಭಯ ಸದಗನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ, ಬಜೆಟ್ ಮೇಲಿನ ಚರ್ಚೆಯೂ ಮುಕ್ತಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡರು.
ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಅಧಿವೇಶನ ನಡೆದ ಉದಾಹರಣೆಗಳಿಲ್ಲ. ೧೯೮೪ ರಿಂದ ಸದನದಲ್ಲಿ ಶಾಸಕನಾಗಿದ್ದೇನೆ. ಆವಾಗಿನಿಂದ ಇಲ್ಲಿಯತನಕ ಈ ರೀತಿ ಆಗಿರಲಿಲ್ಲ. ತಾವು ಈ ಹಿಂದೆ ೧೩ ಬಜೆಟ್ ಮಂಡಿಸಿದಾಗಲೂ ಈ ರೀತಿ ಇರಲಿಲ್ಲ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಯೋಗ್ಯತೆ ಇಲ್ಲದವರನ್ನು ವಿಶ್ವಗುರು ಎಂದು ಕರೆಯಬೇಕೆ ಎಂದು ಅವರು ವಾಗ್ದಾಳಿ ನಡೆಸಿದರು.

ನಾಚಿಕೆಯಾಗಬೇಕು
೧೪ ಮತ್ತು ೧೫ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಕಡಿತವಾದರೂ ಒಮ್ಮೆಯೂ ರಾಜ್ಯದಿಂದ ಆಯ್ಕೆಯಾಗಿರುವ ೨೫ ಸಂಸದರು ಚರ್ಚೆ ಮಾಡಲಿಲ್ಲ. ಬಿಜೆಪಿ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿಲ್ಲ. ಇವರಿಗೆ ನಾಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು
೧೫ನೇ ಹಣಕಾಸು ಆಯೋಗದಲ್ಲಿ ೫೪೯೫ ಕೋಟಿ ರೂ.ಗಳನ್ನು ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತ್ತು. ಅದನ್ನು ರಾಜ್ಯದಿಂದ ರಾಜಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್ ರವರೇ ತಡೆದಿದ್ದಾರೆ. ರಾಜ್ಯದ ಬಗ್ಗೆ ಧ್ವನಿ ಎತ್ತದವರ ಬಗ್ಗೆ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಬಲ್ ಇಂಜಿನ್, ಡಬ್ಬ ಸರ್ಕಾರ
ಪ್ರಧಾನಿ ಮೋದಿ ಅವರು ಮಾತೆತ್ತಿದರೆ ಸಾಕು ದೆಹಲಿಯಲ್ಲೂ ಬಿಜೆಪಿ ಸರ್ಕಾರ, ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ. ನಮ್ಮದು ಡಬ್ಬಲ್ ಇಂಜಿನ್ ಸರ್ಕಾರ ಎನ್ನುತ್ತಿದ್ದರು. ಇದು ಡಬ್ಬಲ್ ಇಂಜಿನ್ ಸರ್ಕಾರ ಅಲ್ಲ, ಟ್ರಬಲ್ ಇಂಜಿನ್ ಹಾಗೂ ಡಬ್ಬಾ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಲೆ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿಲ್ಲ ಎಂದು ದೂರಿದ ಅವರು, ಕರ್ನಾಟಕವನ್ನು ಸ್ವರ್ಗ ಮಾಡುತ್ತೇವೆ ಎಂದು ಹೇಳಿ ನರಕ ಮಾಡಿದ್ದಾರೆ. ಕೇಂದ್ರದ ಪುರಸ್ಕೃತ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಅವರ ಮಾತಿಗೆ ಸಚಿವ ಪ್ರಿಯಾಂಕ ಖರ್ಗೆ ಹಾಗೂ ರಾಮಲಿಂಗಾರೆಡ್ಡಿ ಧ್ವನಿಗೂಡಿಸಿ ಡಬ್ಬಲ್ ಇಂಜಿನ್ ಅಲ್ಲ ಟ್ರಬಲ್ ಇಂಜಿನ್ ಹಾಗೂ ಡಬ್ಬಾ ಸರ್ಕಾರ ಎಂದು ದೂರಿದರು.