ಮೋದಿ ಗುರಿಯಾಗಿರಿಸಿ ಗೋಡೆ ಬರಹ

ನವದೆಹಲಿ, ಮೇ.೧೩- ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣಗಳ ಪಿಲ್ಲರ್‌ಗಳಲ್ಲಿ ಖಲಿಸ್ತಾನ್ ಪರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳ ಬರಹ ಕಂಡುಬಂದಿದೆ.
ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳನ್ನು ಬರೆದಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವರದಿಯ ಪ್ರಕಾರ, ಅಮೆರಿಕ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಬೆಂಬಲಿಗರು ಈ ಘೋಷಣೆಗಳನ್ನು ಬರೆದಿದ್ದಾರೆ ಎನ್ನಲಾಗಿದೆ.
ಇನ್ನೂ, ಭದ್ರತಾ ಸಿಬ್ಬಂದಿಯೊಬ್ಬರು ಭಾನುವಾರ ಬೆಳಗ್ಗೆ ಕರ್ತವ್ಯಕ್ಕೆ ಬಂದಾಗ ಮೆಟ್ರೊ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವ ಘೋಷಣೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯಿಸಿ, ನಾನು ಬೆಳಿಗ್ಗೆ ೮ ಗಂಟೆಗೆ ಡ್ಯೂಟಿಗೆ ಬಂದಿದ್ದೇನೆ. ಈ ವೇಳೆ ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಏನೋ ಬರೆದಿರುವುದನ್ನು ಗಮನಿಸಿದ್ದೇನೆ. ಈ ವೇಳೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗೋಡೆ ಬರಹಗಳನ್ನು ಓದುತ್ತಿದ್ದರು ಎಂದು ತಿಳಿಸಿದರು.
ರಾತ್ರಿ ಹೊತ್ತು ಈ ಘೋಷಣೆಗಳನ್ನು ಬರೆಯಲಾಗಿದೆ. ಯಾಕೆಂದರೆ ಆ ಸಮಯದಲ್ಲಿ ಯಾರೂ ಇರುವುದಿಲ್ಲ. ಈ ಘೋಷಣೆಗಳನ್ನು ಯಾರು ಬರೆದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.
ಬರಹ ಸಂಬಂಧ ದೆಹಲಿ ಪೊಲೀಸರು ಈಗಾಗಲೇ ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.