ಮೋದಿ ಉಪನಾಮ ರಾಗಾ ದೋಷಿ

ನವದೆಹಲಿ,ಮಾ.೨೩: ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಉಪನಾಮ ಇರುತ್ತದೆ ಎಂದು ಟೀಕೆ ಮಾಡಿದ್ದ ರಾಹುಲ್‌ಗಾಂಧಿ ಅವರನ್ನು ದೋಷಿ ಎಂದು ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿ, ಎರಡು ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ, ಹಾಗೆಯೇ, ರಾಹುಲ್‌ಗಾಂಧಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ. ಜತೆಗೆ ೩೦ ದಿನಗಳ ಕಾಲ ಶಿಕ್ಷೆಯನ್ನು ಅಮಾನತು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಹುಲ್‌ಗಾಂಧಿ ಅವರಿಗೆ ನ್ಯಾಯಾಲಯ ಸೆಕ್ಷನ್ ೪೯೯ ಮತ್ತು ೫೦೪ ಅಡಿಯಲ್ಲಿ ೨ ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ಒಂದು ತಿಂಗಳ ಕಾಲ ತೀರ್ಪು ಜಾರಿಯನ್ನು ಅಮಾನತು ಮಾಡಿರುವುದಾಗಿಯೂ ನ್ಯಾಯಾಲಯ ಹೇಳಿ ಜಾಮೀನು ಮಂಜೂರು ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಮೋದಿ ಉಪನಾಮದ ಬಗ್ಗೆ ಟೀಕೆ ಮಾಡಿದ್ದರು. ಈ ಸಂಬಂಧ ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮ್ಮೆಯನ್ನು ರಾಹುಲ್‌ಗಾಂಧಿ ವಿರುದ್ಧ ದಾಖಲಿಸಲಾಗಿತ್ತು.
ರಾಹುಲ್‌ಗಾಂಧಿ ಅವರ ಮೋದಿ ಉಪನಾಮ ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ನ್ಯಾಯಾಲಯ, ಇಂದು ತೀರ್ಪು ಪ್ರಕಟಿಸಿ ರಾಹುಲ್‌ಗಾಂಧಿ ದೋಷಿ ಎಂದು ಹೇಳಿ ಅವರಿಗೆ ೨ ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು.
ರಾಹುಲ್‌ಗಾಂಧಿ ಅವರು ೨೦೧೯ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುತ್ತಿದ್ದಾಗ ಎಲ್ಲ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮ ಹೊಂದಿರುವುದು ಹೇಗೆ ಎಂದು ವ್ಯಂಗ್ಯವಾಡಿದ್ದರು.
ರಾಹುಲ್‌ರವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿ ರಾಹುಲ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇವರ ಈ ಹೇಳಿಕೆ ಮೋದಿ ಉಪನಾಮ ಹೊಂದಿರುವವರಿಗೆ ಮಾಡಿದ ಅಪಮಾನ. ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎಂಬ ಅರ್ಥದಲ್ಲಿ ರಾಹುಲ್‌ಗಾಂಧಿ ಮಾತನಾಡಿದ್ದಾರೆ ಇದು ಸರಿಯಲ್ಲ, ಎಂದು ರಾಹುಲ್‌ಗಾಂಧಿ ವಿರುದ್ಧ ಹಲವು ನಾಯಕರುಗಳು ಹರಿಹಾಯ್ದಿದ್ದರು.
ದೇಶದಲ್ಲಿ ಮೋದಿ ಎಂಬುದು ಸಾಮಾನ್ಯ ಉಪನಾಮ, ರಾಹುಲ್‌ಗಾಂಧಿಯವರು ಮೋದಿ ಎಂಬ ಉಪನಾಮ ಹೊಂದಿರುವವರನ್ನೆಲ್ಲ ಕಳ್ಳರು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ, ಇದು ಸರಿಯಲ್ಲ, ಮೋದಿ ಎಂಬ ಉಪನಾಮ ಹೊಂದಿರುವವರಿಗೆ ಮಾನಹಾನಿಯಾಗಿದೆ ಎಂದು ಗುಜರಾತ್‌ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ
ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕ್ಕದ್ದಮ್ಮೆಯನ್ನು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎಚ್ ವರ್ಮಾ ಕಳೆದವಾರ ವಾದ ಪ್ರತಿವಾದವನ್ನು ಆಲಿಸಿ ಮಾ. ೨೩ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು. ಅದರಂತೆ ಇಂದು ತೀರ್ಪು ಪ್ರಕಟವಾಗಿದ್ದು, ರಾಹುಲ್ ಅವರನ್ನು ದೋಷಿ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಲು ರಾಹುಲ್‌ಗಾಂಧಿ ಅವರು ೨೦೨೧ ಅಕ್ಟೋಬರ್‌ನಲ್ಲಿ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈಗ ತೀರ್ಪು ಪ್ರಕಟವಾಗಿದ್ದರೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಮೇಲ್ಮನವಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂರತ್ ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಹೇಡಿತನದ ಸರ್ವಾಧಿಕಾರದ ಬಿಜೆಪಿ ಸರ್ಕಾರದ ಕರಾಳ ಕೃತ್ಯಗಳನ್ನು ರಾಹುಲ್‌ಗಾಂಧಿ ಮತ್ತು ಪ್ರತಿಪಕ್ಷಗಳು ಬಹಿರಂಗಪಡಿಸುತ್ತಿರುವುದರಿಂದ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ರಾಜಕೀಯ ಭಾಷಣಗಳ ಮೇಲೆ ಕೇಸನ್ನು ಹಾಕುತ್ತಿದೆ ಎಂದು ಹರಿಹಾಯ್ದಿದ್ದಾರೆ. ಮೋದಿ ಸರ್ಕಾರ ರಾಜಕೀಯ ದಿವಾಳಿತನಕ್ಕೆ ಬಲಿಯಾಗಿದೆ. ಇಡಿ, ಪೊಲೀಸರನ್ನು ಕಳುಹಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್
ಸೂರತ್‌ನ ಜಿಲ್ಲಾ ನ್ಯಾಯಾಲಯ ಮಾನನಷ್ಟ ಮೊಕದ್ದಮ್ಮೆ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಹೇಳಿರುವ ಬೆನ್ನಲ್ಲೆ ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ, ಮಹಾತ್ಮಗಾಂಧಿಜೀ ಅವರ ’ನನ್ನ ಧರ್ಮ ಸತ್ಯ ಮತ್ತು ಅಹಿಂಸೆ’ಯ ಮೇಲೆ ನಿಂತಿದೆ. ಸತ್ಯ ನನ್ನ ದೇವರಾಗಿದೆ. ಅಹಿಂಸೆ ಅದನ್ನು ಪಡೆಯುವ ಸಾಧನವಾಗಿದೆ ಎಂಬ ಸಾಲುಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.