
ನವದೆಹಲಿ, ಮಾ.೩೦-ಆಮ್ ಆದ್ಮಿ ಪಕ್ಷ (ಎಎಪಿ) ಇಂದಿನಿಂದ ದೇಶಾದ್ಯಂತ “ಮೋದಿ ಹಠಾವೋ, ದೇಶ್ ಬಚಾವೋ” (ಮೋದಿ ತೆಗೆದುಹಾಕಿ, ಭಾರತವನ್ನು ಉಳಿಸಿ) ಎಂಬ ಪೋಸ್ಟರ್‌ಗಳ ಅಭಿಯಾನ ಆರಂಭಿಸಿದೆ.
ಕರ್ನಾಟಕ ಸೇರಿದಂತೆ ಪಕ್ಷದ ಎಲ್ಲಾ ರಾಜ್ಯ ಘಟಕಗಳಲ್ಲಿ ತಮ್ಮ ರಾಜ್ಯಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲು ಸೂಚಿಸಲಾಗಿದೆ. ಪೋಸ್ಟರ್‌ಗಳನ್ನು ೧೧ ಭಾಷೆಗಳಲ್ಲಿ ಮುದ್ರಿಸಲಾಗಿದೆ ಎಂದು ದೆಹಲಿ ಎಎಪಿ ಮುಖ್ಯಸ್ಥ ಮತ್ತು ಪರಿಸರ ಸಚಿವ ರಾಯ್ ತಿಳಿಸಿದ್ದಾರೆ.
ಹಿಂದಿ ಮತ್ತು ಇಂಗ್ಲಿಷ್ ಅಲ್ಲದೆ ಉರ್ದು, ಪಂಜಾಬಿ, ಗುಜರಾತಿ, ತೆಲುಗು, ಬೆಂಗಾಲಿ, ಒಡಿಯಾ, ಕನ್ನಡ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಎಎಪಿ ಮಾರ್ಚ್ ೨೩ರಂದು ಜಂತರ್ ಮಂತರ್‌ನಲ್ಲಿ ’ಮೋದಿ ಹಟಾವೋ ದೇಶ್ ಬಚಾವೋ’ ಘೋಷಣೆಯಡಿಯಲ್ಲಿ ದೊಡ್ಡ ಸಾರ್ವಜನಿಕ ಸಭೆಯನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಉದ್ದೇಶಿಸಿ ಮಾತನಾಡಿದ್ದರು.
ಈ ಸಭೆಯಲ್ಲಿ ಪಕ್ಷದ ದೆಹಲಿ ರಾಜ್ಯ ಸಂಚಾಲಕ ಗೋಪಾಲ್ ರೈ ಅವರು ಮಾರ್ಚ್ ೩೦ರಂದು ಆಮ್ ಆದ್ಮಿ ಪಕ್ಷವು ದೇಶಾದ್ಯಂತ ’ಮೋದಿ ಹಟಾವೋ ದೇಶ್ ಬಚಾವೋ’ ಪೋಸ್ಟರ್‌ಗಳನ್ನು ಹಾಕಲಿದೆ ಎಂದು ಘೋಷಿಸಿದ್ದರು.
ಇನ್ನೂ, ಕಳೆದ ವಾರ ದೆಹಲಿಯ ಗೋಡೆ ಮತ್ತು ವಿದ್ಯುತ್ ಕಂಬಗಳ ಮೇಲೆ “ಮೋದಿ ಹಠಾವೋ, ದೇಶ್ ಬಚಾವೋ” (ಮೋದಿ ತೆಗೆದುಹಾಕಿ, ಭಾರತವನ್ನು ಉಳಿಸಿ) ಎಂಬ ಪೋಸ್ಟರ್ಗಳು ಕಾಣಿಸಿಕೊಂಡಿತ್ತು. ನಂತರ ಪೊಲೀಸರು ಆರು ಜನರನ್ನು ಬಂಧಿಸಿ ೪೯ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.