ಮೋದಿ ಆತ್ಮವಲೋಕನ ಮಾಡಿಕೊಳ್ಳಲಿ

ರಾಜಗಢ, ಮೇ.೬-ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸ ಹಿಂದೂ-ಮುಸ್ಲಿಂ ವಿವಾದವನ್ನು ಆಧರಿಸಿದೆ. ಇದರಿಂದ ಯಾರಿಗೆ ಲಾಭವಾಗಿದೆ ಹಾಗೂ ಯಾರಿಗೆ ನಷ್ಟವಾಗಿದೆ ಎಂಬುದನ್ನು ಮೋದಿ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪ್ರತಿಪಾದಿಸಿದ್ದಾರೆ.

ಮಧ್ಯಪ್ರದೇಶದ ರಾಜಗಢ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದಿಗ್ವಿಜಯ್ ಸಿಂಗ್, ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಿಂದ ತನಗೆ ಸಮಾಧಾನವಾಗಿಲ್ಲ ಎಂದು ಹೇಳಿದ್ದಾರೆ.

ರಾಜಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಘೋಗಢ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಸಿಂಗ್ ಅವರು ಮಾತನಾಡಿದರು.

ನೈಜ ಸಮಸ್ಯೆಗಳ ಆಧಾರದಲ್ಲಿ ಎಲ್ಲಿ ಚುನಾವಣೆ ನಡೆಸಲಾಗುತ್ತಿದೆ ಪಿತ್ರಾರ್ಜಿತ ತೆರಿಗೆಯಂತಹ ವಿಷಯಗಳ ಕುರಿತಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಮುಸ್ಲಿಮರಿಗೆ ನೀಡಲು ಒಬಿಸಿ ಮೀಸಲಾತಿಯನ್ನು ಕಿತ್ತುಕೊಳ್ಳಲು ಹಾಗೂ ಒಳನುಸುಳುಕೋರರಿಗೆ ಸಂಪತ್ತನ್ನು ಮರು ಹಂಚಿಕೆ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಅದು ಆರೋಪಿಸಿದೆ ಎಂದು ಅವರು ಹೇಳಿದರು.