ಮೋದಿ ಆಡಳಿತಕ್ಕೆ ೯ ವರ್ಷ ದೇಶಾದ್ಯಂತ ಜನಸಂಪರ್ಕ ಅಭಿಯಾನ

ನವದೆಹಲಿ,ಮೇ.೨೯- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಹಿಡಿದು ೯ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಇಂದಿನಿಂದ ಜೂನ್ ೩೦ರ ತನಕ ವಿಶೇಷ ಜನ ಸಂಪರ್ಕ ಅಭಿಯಾನ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸಚಿವರು ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಏಕಕಾಲದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ.
ದೇಶಾದ್ಯಂತ ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸಚಿವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ನೆಚ್ಚಿನ ನಾಯಕ ೯ ವರ್ಷ ಪ್ರಧಾನಿಯಾಗಿ ಪೂರ್ಣಗೊಳಿಸಿದ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಮೋದಿ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಮಾಡಿದ ಎಲ್ಲಾ ಸಾಧನೆಗಳ ಕುರಿತು ಮಾಹಿತಿ ನೀಡಲಿದ್ದಾರೆ.ಇದೇ ವೇಳೆ ರಾಜ್ಯದ ಜನರೊಂದಿಗೆ ಅನೌಪಚಾರಿಕವಾಗಿ ಸಂವಹನ ನಡೆಸುತ್ತಾರೆ” ಎಂದು ಮೂಲಗಳು ತಿಳಿಸಿವೆ.
‘ಬಿಜೆಪಿ ಸರ್ಕಾರ ಇಲ್ಲದ ಕಡೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಮುಂಬೈನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಹಮದಾಬಾದ್‌ನಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಬೆಂಗಳೂರಿನಲ್ಲಿ ಸಚಿವೆ ಮೀನಾಕ್ಷಿ ಲೇಖಿ, ಲಕ್ನೋದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ರೈಲ್ವೆ ಸಚಿವ ಅಶ್ವನಿ ಪತ್ರಿಕಾಗೋಷ್ಠಿ ನಡೆಸಿದರು.
ಗುವಾಹಟಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಭೋಪಾಲ್‌ನಲ್ಲಿ ಮೀನುಗಾರಿಕೆ ಸಚಿವ ಭೂಪೇಂದ್ರ ಯಾದವ್, ಹೈದರಾಬಾದ್‌ನಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಚೆನ್ನೈನಲ್ಲಿ ಜಿತೇಂದ್ರ ಸಿಂಗ್, ಪಾಟ್ನಾದಲ್ಲಿ ಗಜೇಂದ್ರ ಸಿಂಗ್, ಕೋಲ್ಕತ್ತಾದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಜೈಪುರದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ರೋಹ್ಟಕ್‌ನಲ್ಲಿ ಸ್ಮೃತಿ ಇರಾನಿ ಪತ್ರಿಕಾಗೋಷ್ಢಿಯಲ್ಲಿ ಭಾಗಿಯಾಗಿದ್ದರು.

ಲೋಕಸಭೆ ಚುನಾವಣೆ ಚರ್ಚೆ
ದೆಹಲಿಯ ಪಕ್ಷದ ಪ್ರಧಾನ ಕಛೇರಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೪ ರ ಲೋಕಸಭೆ ಚುನಾವಣೆಯ ಕುರಿತು ವ್ಯಾಪಕ ಚರ್ಚೆ ನಡೆಸಲಾಯಿತು
ಇದೇ ವೇಳೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.