ಮೋದಿ ಅವರ ಭಾಷಣದಿಂದ ಹೊಟ್ಟೆ ತುಂಬಲ್ಲ : ಸಚಿವ ಡಾ.ಶರಣಪ್ರಕಾಶ ಪಾಟೀಲ್

ಸೇಡಂ,ಏ.17:ರಾಜ್ಯದ ಕಾಂಗ್ರೆಸ್ ಸರ್ಕಾರ ತಂದ ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಯೋಜನೆಗಳನ್ನು ರೂಪಿಸುತ್ತದೆ. ದೇಶದ ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾದದ್ದು ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಹೇಳಿದರು. 2024ರ ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತವಾಗಿ ತಾಲೂಕಿನ ಹೂಡಾ.ಕೆ. ಗ್ರಾಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಸಾಲ ಮನ್ನಾ ಮಾಡಲಿಲ್ಲ, 2009 ರಲ್ಲಿ ಕಾಂಗ್ರೆಸ್ ಪಕ್ಷ ನ್ಯಾಷನಲ್ ಬ್ಯಾಂಕ್ ಗಳ ಸಾಲ ಮನ್ನಾ ಕಾಂಗ್ರೆಸ್ ಪಕ್ಷ ಮಾಡಿದೆ. ಆದರೆ ಮೋದಿ ಅವರು ದೇಶದ ಶ್ರೀಮಂತರಾದ ಅಂಬಾನಿ, ಅದಾನಿ ಅವರ 12000 ಕೋಟಿ ಸಾಲ ಮನ್ನಾ ಮಾಡಿದ್ದಾರೆ.ಶ್ರೀಮಂತರ ಸಾಲ ಮನ್ನಾ ಮಾಡುವ ಬಿಜೆಪಿ ಅವರು ಬಡವರ, ರೈತರ ಸಾಲ ಮನ್ನಾ ಯಾಕೆ ಮಾಲಲಿಲ್ಲ, ಮೋದಿ ಅವರ ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಕಾಡಾ ಅಧ್ಯಕ್ಷರಾದ ಮಹಾಂತಪ್ಪ ಸಂಗಾವಿ ಅವರು ಮಾತನಾಡಿ, ಕಲಬುರಗಿ ಅಭಿವೃದ್ಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಕೊಡುಗೆ ಸಾಕಷ್ಟಿದೆ. ಕಲ್ಯಾಣ ಕರ್ನಾಟಕ ಪ್ರಗತಿಗೆ ಆರ್ಟಿಕಲ್ 371ರಿ. ತಂದ ಮಹಾನುಭಾವ ಎಂದು ಬಣ್ಣಿಸಿದರು. ಬಿಜೆಪಿ-ಜೆಡಿಎಸ್ ಪಕ್ಷಕ್ಕೆ ಸಿದ್ದಾಂತಗಳಿಲ್ಲ, ಆದರೆ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಗಟ್ಟಿ ಸೈದ್ಧಾಂತಿಕ ನೆಲ ಇದೆ, ಬಡವರ, ಕೂಲಿ-ಕಾರ್ಮಿಕರ ಪರವಾಗಿ ಸತತವಾಗಿ ಯೋಜನೆ ರೂಪಿಸುವ ಮೂಲಕ ಕಾಂಗ್ರೆಸ್ ಕೆಲಸ ಮಾಡಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಧೂಳಪ್ಪ ದೊಡ್ಡಮನಿ, ಚೆನ್ನಯ್ಯ ಪುರಾಣೀಕ, ಜಗನ್ನಾಥ ಹಾಗರಗಿ, ಸಾಬಣ್ಣ ಸುಬಕನೂರು, ಬಸವರಾಜ ಪಿಲ್ಲಿ, ಭೀಮರಾಜ ತರನಳ್ಳಿ, ದೇವಂದ್ರಪ್ಪ ಪಿಲ್ಲಿ, ರುದ್ರ ಪಿಲ್ಲಿ ಸೇರಿದಂತೆ ಅನೇಕರಿದ್ದರು.

ದೇಶದ ಬೆನ್ನೆಲುಬು ರೈತನಾಗಿದ್ದಾನೆ, ಆದರೆ ರೈತನ ಬೆನ್ನೆಲುಬು ಕಾಂಗ್ರೆಸ್ ಪಕ್ಷವಾಗಿದೆ. ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಸಾಲ ಮನ್ನಾ ಮಾಡಲಾಗಿದೆ.

ಡಾ.ಶರಣಪ್ರಕಾಶ ಪಾಟೀಲ್, ಸಚಿವರು ಕರ್ನಾಟಕ ಸರ್ಕಾರ