ಮೋದಿ ಅವರಿಂದ ಮೆಚ್ಚುಗೆ ಪಡೆದ ಮಾಲೂರು ಕಲಾವಿದರ ‘ಬಾರಿಸು ಕನ್ನಡ ಡಿಂಡಿಮವ’ ರೂಪಕ

ಕೋಲಾರ,ಮಾ,೩- ಜಿಲ್ಲೆಯ ಮಾಲೂರಿನ ರಂಗ ವಿಜಯಾ ಸಂಸ್ಥೆ ಅಭಿನಯಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ಎಂಬ ಎರಡು ರೂಪಕ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕೋಲಾರ ಜಿಲ್ಲೆಯ ಹಿರಿಮೆ ದೆಹಲಿಯಲ್ಲೂ ಮೊಳಗಿತು.
ದೆಹಲಿಯಲ್ಲಿ ನಡೆದ ದೆಹಲಿ-ಕರ್ನಾಟಕ ಸಂಘದ ೭೫ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ದೆಹಲಿಯ ತಾಲ್ಕೋಟ್ಕರ್ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಪ್ರಧಾನಿ ಮೋದಿ ಮಾತನಾಡಿದರು.
ಮೋದಿಯವರೇ ಬಾರಿಸು ಕನ್ನಡ ಡಿಂಡಿಮವ .. ಓ ಕರ್ನಾಟಕ ಹೃದಯ ಶಿವ.. ಎಲ್ಲಾದರೂ ಇರು ಎಂತಾದರು… ಇರು ಎಂದೆಂದೂ ನೀ ಕನ್ನಡವಾಗಿರು ಎಂದು ಕನ್ನಡದಲ್ಲಿ ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.
ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಅತಿ ದೊಡ್ಡ ಸಾಹಿತ್ಯ ಲೋಕದ ಧ್ರುವತಾರೆ ಕರ್ನಾಟಕ, ಜೊತೆಗೆ ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿ ಮತ್ತು ಕ್ರೀಡೆ ಸಾಕಷ್ಟು ಮುಂದುವರೆದಿದ್ದು ಕರ್ನಾಟಕ ರಾಜ್ಯ ಒಂದು ಬಹು ಸಂಸ್ಕೃತಿಯ ಸಾಂಸ್ಕೃತಿಕ ರಾಜ್ಯ ಎಂದು, ತಮ್ಮ ಇಡೀ ಭಾಷಣದ್ದುಕ್ಕೂ ರಂಗ ವಿಜಯಾ ತಂಡದ ಎರಡು ರೂಪಕಗಳ ಕಥಾವಸ್ತುವನ್ನೇ ಇಟ್ಟುಕೊಂಡು ಅವರು ಮಾತನಾಡಿದ್ದು ರಂಗ ವಿಜಯ ತಂಡ ಹಾಗೂ ಕೋಲಾರ ಜಿಲ್ಲೆಗೆ ಸಂದ ಹಿರಿಮೆಯಾಯಿತು.
ಈ ಸಂಭ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಂಸದರು ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಸಂಸದರಾದ ಎಸ್.ಮುನಿಸ್ವಾಮಿ, ಆಧಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿಗಳು, ಸುತ್ತೂರು ಶ್ರೀಗಳು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಸಾಕ್ಷಿಯಾದರು.
ರಂಗ ವಿಜಯ ಅಭಿನಯಿಸಿದ “ಬಾರಿಸು ಕನ್ನಡ ಡಿಂಡಿಮ”ದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಪಾತ್ರದಲ್ಲಿ ಪ್ರಖ್ಯಾತ ಕಿರುತೆರೆಯ ಹಿರಿಯ ನಟ ಪೂರ್ಣಿಂದ್ರ ಶೇಖರ್, ಎಲ್ಲರ ಗಮನ ಸೆಳೆದರೆ, ದ.ರಾ. ಬೇಂದ್ರೆಯಾಗಿ ಸಿ. ಕೆ. ರವಿ ಶಂಕರ್, ಶಿವರಾಮ ಕಾರಂತರಾಗಿ ರಾಜ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಆಗಿ ಬೇಲೂರಿನ ಆಡಿಟರ್ ಕೃಷ್ಣಮೂರ್ತಿ, ವಿ.ಕೃ.ಗೋಕಾಕರಾಗಿ ಬಿ.ಕೆ. ಜಯರಾಮ್, ಯು.ಅರ್. ಅನಂತಮೂರ್ತಿಯಾಗಿ ಮೇಜರ್ ಡಾ. ಸತ್ಯನಾರಾಯಣ, ಗಿರೀಶ್ ಕಾರ್ನಾಡ್ ಆಗಿ ರಘುರಾಜನಂದ, ಡಾ. ಚಂದ್ರಶೇಖರ್ ಕಂಬಾರ ಮಹೇಂದ್ರ ಮುದಿಗೌಡರ ನಾಗೇಶಪ್ಪ ಎಲ್ಲರ ಗಮನ ಸೆಳೆದರು.
ನಿರೂಪಕರಾಗಿ ಖ್ಯಾತ ರಂಗಭೂಮಿ ಸಂಗೀತ ನಿರ್ದೇಶಕ ಟಿ. ಲಕ್ಷ್ಮೀನಾರಾಯಣ್, ನಿರೂಪಕಿಯಾಗಿ ಕಲಾವತಿ ರಾಮಣ್ಣ, ಯಕ್ಷಗಾನದ ಪಟುವಾಗಿ ಗೀತಾ ಪಿ. ಎಸ್., ಚಿಕ್ಕವೀರರಾಜೇಂದ್ರನಾಗಿ ಬಿ.ಎಸ್. ಪಾಟೀಲ್, ತೊಘಲಕ್ ಪಾತ್ರದಲ್ಲಿ ತಿಪಟೂರು ತಿಮ್ಮೇಗೌಡ, ಕಾವೇರಿಯಾಗಿ ವರಲಕ್ಷ್ಮಿ, ಗಂಗೆಯಾಗಿ ಶ್ಯಾಮಲ, ರೈತನಾಗಿ ಪವನ್ ಕುಮಾರ್ ನಟಿಸಿದರು.
“ಜಯ ಭಾರತ ಜನನಿಯ ತನುಜಾತೆ” ರೂಪಕದಲ್ಲಿ ರಾಣಿ ಅಬ್ಬಕ್ಕನಾಗಿ ಗೀತಾ ಪಿ .ಎಸ್., ಕಿತ್ತೂರು ಚೆನ್ನಮ್ಮ ಶಾಮಲ ಸಿ. ಎಲ್., ಸಂಗೊಳ್ಳಿ ರಾಯಣ್ಣನಾಗಿ ರಘು ರಾಜ ನಂದ, ರಾಜಾ ವೆಂಕಟಪ್ಪ ನಾಯಕನಾಗಿ ಆಡಿಟರ್ ಕೃಷ್ಣಮೂರ್ತಿ, ಸಿಂಧೂರ ಲಕ್ಷ್ಮಣರಾಗಿ ಭರತ್ ಕುಮಾರ್ ಟಿ., ಹರ್ಡೇಕರ್ ಮಂಜಪ್ಪ ನಾಗಿ ಬಿ. ಎಸ್ ಪಾಟೀಲ್ ಜನರ ಮನ ಗೆದ್ದರು.
ಇದಲ್ಲದೆ ಇತರೆ ಪಾತ್ರಗಳಲ್ಲಿ ಲಲಿತಾ, ಪ್ರೇಮಾ ತಿಮ್ಮೇಗೌಡ, ನಿರ್ಮಲ ಕುಮಾರಿ, ಸ್ಮಿತಾ, ಬಿಂದು, ಆರ್.,ಭರತ್, ಸ್ಮೃತಿ ಎಂ.ಎಂ, ಮನಸ್ವಿ, ಎಂ.ಎಂ, ಮಂಗಳ ಕುಮಾರಿ ಮುಂತಾದವರು ಅದ್ಭುತವಾಗಿ ಅಭಿನಯಿಸಿದ್ದರು.
ಎರಡು ರೂಪಕಗಳನ್ನು ಖ್ಯಾತ ರಂಗಭೂಮಿ ಸಂಗೀತ ನಿರ್ದೇಶಕ ನಟ ಹಾಗೂ ನಾಟಕಕಾರ ಟಿ ಲಕ್ಷ್ಮೀನಾರಾಯಣ ರಚಿಸಿದರು. ಪ್ರಸಾದನ ರಂಗಸಜ್ಜಿಕೆ ತಿಪಟೂರು ತಿಮ್ಮೇಗೌಡ ಶಂಕರ್ ನಾಗ್ ಪ್ರಶಸ್ತಿ ವಿಜೇತ ನಿರ್ದೇಶಕ ಕಲಾ ಶ್ರೇಷ್ಠ ಮಾಲೂರು ವಿಜಿ ನಿರ್ದೇಶನ ಮಾಡಿದ್ದರು.
ದೆಹಲಿ ಕರ್ನಾಟಕ ಸಂಘದ ಈ ಅದ್ದೂರಿ ಕಾರ್ಯಕ್ರಮದಲ್ಲಿ ರಂಗ ವಿಜಯದ ಕಾರ್ಯಾಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕೋಲಾರ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಜಯ್ ಕುಮಾರ್, ಸಂದೀಪ್ ಮುಂತಾದವರು ಭಾಗವಹಿಸಿದ್ದರು.