ಮೋದಿ ಅಲೆಗೆ ಬೆದರಿ ಸ್ಪರ್ಧೆಯಿಂದ ಹಿಂದೆ ಸರಿದ ಸಚಿವರು

ಬಿವೈವಿ ಟೀಕೆ
ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರರವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನೀಡಿ, ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ರಾಜ್ಯವನ್ನು ಬರಮುಕ್ತ ನಾಡಾಗಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಮಾಡಿದರು.

ಮೈಸೂರು, ಮಾ. ೨೭- ಪ್ರಧಾನಿ ನರೇಂದ್ರ ಮೋದಿಯವರ ಅಲೆಗೆ ಹೆದರಿ ರಾಜ್ಯದ ಸಚಿವರಾರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಪಕ್ಷ ೧೦-೧೨ ಸಚಿವರನ್ನು ಚುನಾವಣಾ ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದರು. ಆದರೆ ಸೋಲಿನ ಭೀತಿಯಿಂದ ಸಚಿವರುಗಳು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಹಾಗಾಗಿ ಬಿಜೆಪಿ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಂಡಾಯ ಶಮನ
ಕೆಲ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದಲ್ಲಿ ಬಂಡಾಯ ಎದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ನಾಲ್ಕು ದಿನ ಕಾದು ನೋಡಿ ಚಮತ್ಕಾರವೇ ನಡೆಯುತ್ತದೆ. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಬಂಡಾಯ ಸೇರಿದಂತೆ ಎಲ್ಲವೂ ಬಗೆಹರಿಯಲಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಎಲ್ಲ ಕಡೆ ಹೋಗಿ ಬಂಡಾಯ ಶಮನ ಮಾಡುತ್ತಿದ್ದಾರೆ ಎಂದರು.
ಪಕ್ಷದ ನಿರ್ಧಾರಗಳನ್ನು ನಾನಾಗಲೀ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಾಗಲೀ ಮಾಡುತ್ತಿಲ್ಲ. ಪಕ್ಷದ ವರಿಷ್ಠರದ್ದೇ ಎಲ್ಲ ನಿರ್ಧಾರ. ನಮ್ಮ ಮಾತು ಆಲಿಸಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಿಲ್ಲ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ ಎಂದು ಮಾರ್ಮಿಕವಾಗಿ ವಿಜಯೇಂದ್ರ ಹೇಳಿದರು.
ತಾಯಿ ಚಾಮುಂಡಿ ದರ್ಶನ
ಇದಕ್ಕೂ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡರು.
ಹಾಗೆಯೇ ಗೋಮಾತೆಗೆ ನೀರುಣಿಸುವ ಮೂಲಕ ನಾಡಿನೆಲ್ಲೆಡೆ ನೀರಿಗಾಗಿ ಉಂಟಾಗಿರುವ ಹಾಹಾಕಾರವನ್ನು ದೂರವಾಗಿಸಿ, ಜಲಸಂಪತ್ತು ವೃದ್ಧಿಸುವಂತೆ ಹಾಗೂ ರೈತಬಂಧುಗಳಿಗೆ ಸಾಂಕೇತಿಕವಾಗಿ ನೇಗಿಲು ನೀಡಿ ಗೌರವಿಸುವ ಮೂಲಕ ರಾಜ್ಯವನ್ನು ಬರ ಮುಕ್ತ ನಾಡನ್ನಾಗಿಸುವಂತೆ ಅವರು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು, ಮಾಜಿ ಸಚಿವ ರಾಮದಾಸ್, ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್, ಓಬಿಸಿ ಮೋರ್ಚಾ ಅಧ್ಯಕ್ಷ ಆರ್. ಪ್ರಭು ಕೌಟಿಲ್ಯ, ಜಿಲ್ಲಾಧ್ಯಕ್ಷರಾದ ಎಲ್. ನಾಗೇಂದ್ರ, ನಿರಂಜನಕುಮಾರ್, ಎಲ್.ಆರ್. ಮಹದೇವಸ್ವಾಮಿ, ಶಾಸಕ ಶ್ರೀವತ್ಸ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.