ಮೋದಿಯಿಂದ ದೇಶದ ಸಾಂಸ್ಕೃತಿಕ ಪರಂಪರೆ ಪುನರ್‍ನಿರ್ಮಾಣ: ಅಮಿತ್ ಶಾ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.12:- ಮೋದಿ ಅವರು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪುನರ್ ನಿರ್ಮಾಣ ಮಾಡುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಶ್ರೀಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಸೇವಾರ್ಥದ ಅತಿಥಿಗೃಹ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕೋಟಿ ಕೋಟಿ ಹಿಂದೂಗಳ ಸಂಕಲ್ಪವಾಗಿದ್ದ ರಾಮಮಂದಿರ, ಕಾಶಿ ಕಾರಿಡಾರ್, ಮಹಾಕಾಳೆ ಕಾರಿಡಾರ್ ಗಳನ್ನು ಮಾಡುವ ಮೂಲಕ ಅಲ್ಲಿನ ಪುನರುಜ್ಜೀವಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲ, ಮೋದಿ ಅವರು ಸಂಸ್ಕೃತಿ, ಆಯುರ್ವೇದ, ಉಳಿವಿಗಾಗಿಯೂ ಅನೇಕ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುತ್ತೂರಿನ ಎಲ್ಲಾ 24 ಮಠಾಧೀಶರನ್ನು ಸ್ಮರಣೆ ಮಾಡುತ್ತೇನೆ. ಲಿಂಗಾಯತ ಸಮುದಾಯಕ್ಕೆ ಅವರು ಕೊಡುಗೆ ನೀಡಿದ್ದು, ಅವರಿಗೆ ಪ್ರಣಾಮ ತಿಳಿಸುತ್ತೇನೆ ಎಂದ ಅವರು, ಕರ್ನಾಟಕದ ಪುಣ್ಯಭೂಮಿಯಲ್ಲಿ ಬಸವಣ್ಣ ಅವರು ಕೋಟ್ಯಾಂತರ ಜನರಿಗೆ ತಮ್ಮ ವಚನಗಳ ಮೂಲಕ, ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಭಕ್ತಿಯ ಪ್ರೇರಣೆ ನೀಡಿದ್ದಾರೆ ಎಂದರು.
ಸುತ್ತೂರು ಮಠದ ಎಲ್ಲಾ ಪೀಠಾಧಿಪತಿಗಳು ಸೇವಾ ಮನೋಭಾವ ಇಂದಿಗೂ ಮುಂದುವರಿಸಿದ್ದಾರೆ. ಅದರ ಪರಿಣಾಮವಾಗಿ ಲಕ್ಷಾಂತರ ಭಕ್ತಸಮೂಹ ಹೊಂದಿದ್ದು, ಅನೇಕರು ಸುತ್ತೂರು ಮಠದ ಸೇವೆ ಪಡೆದು, ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ಜನರ ಜೀವನದ ಒಳಿತಿಗೆ ಬೆಳಕು ಚೆಲ್ಲಿದ್ದಾರೆ. ಅದಕ್ಕಾಗಿ ಬಿಜೆಪಿ ವತಿಯಿಂದ ಪ್ರಣಾಮ ತಿಳಿಸುತ್ತೇನೆ ಎಂದು ಹೇಳಿದರು.
ನಿನ್ನೆಯ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು, ಆದರೆ ಪಾರ್ಲಿಮೆಂಟ್ ಅಧಿವೇಶನ ಮುಂದೂಡಿದ ಕಾರಣ ನಿನ್ನೆ ಬರಲು ಆಗಲಿಲ್ಲ. ಅಹ್ಮದಾಬಾದ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು, ಆದಕಾರಣ ಬರಲು ಆಗಲಿಲ್ಲ ಎಂದ ಅವರು, ಆರು ದಿನಗಳ ಸುತ್ತೂರು ಜಾತ್ರೆಯಲ್ಲಿ ಕುಸ್ತಿ, ಪಾರಂಪರಿಕ ಕ್ರೀಡೆ, ಸಾಮೂಹಿಕ ವಿವಾಹ, ಕೊಂಡೋತ್ಸವ ಹೀಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಲ್ಲ ವರ್ಗದ ಜನರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಲಾಗಿದೆ. ಈ ಪರಂಪರೆಯನ್ನು ಮುಂದುವರಿಸುವ ಮೂಲಕ ಸುತ್ತೂರು ಸಂಸ್ಥಾನ 300ಕ್ಕೂ ಹೆಚ್ಚು ಸಂಸ್ಥೆ, 20 ಸಾವಿರ ಸಿಬ್ಬಂದಿ, ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಂಗವಿಕಲರಿಗೆ ಪಾಲಿಟೆಕ್ನಿಕ್ ಕಾಲೇಜು ಮಾಡಿರುವುದು ಆದರ್ಶ ಸಂಗತಿ, ಈ ಮೂಲಕ ಅನೇಕರು ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಸುತ್ತೂರು ಮಠದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಇತ್ತೀಚಿಗೆ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಅಯೋಧ್ಯೆಯಲ್ಲೂ ಸಹ ಸುತ್ತೂರು ಶಾಖಾ ಮಠ ನಿರ್ಮಿಸುವ ತೀರ್ಮಾನಕ್ಕೆ ಶ್ರೀಗಳು ಬಂದಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಸುತ್ತೂರು ಮಠದ ಪ್ರತಿಯೊಂದು ಸೇವಾ ಕಾರ್ಯಗಳನ್ನು ಸಮಾಜ ಹತ್ತಿರದಿಂದ ಕಡಿದೆ. ಆ ಕಾರಣದಿಂದಾಗಿ ಬಿಜೆಪಿ ಸದಾ ನಿಮ್ಮೊಂದಿಗೆ ಇರಲಿದೆ. ನಿಮ್ಮ ಕೊಡುಗೆಯನ್ನು ಕಾರ್ಯಕರ್ತರು ಸದಾಕಾಲವೂ ಸ್ಮರಿಸುತ್ತಾ ಜನರ ಮಧ್ಯೆ ಹೋಗುತ್ತೇವೆ, ಕೊನೆಯವರೆಗೂ ಈ ಸೇವೆಯನ್ನು ಕೊಂಡಾಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದರು.
ಪರಂಪರೆಯ ಮಹಾಕೊಂಡಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸುತ್ತೂರು ಮಠ ಆಧ್ಯಾತ್ಮಿಕ ಚಟುವಟಿಕೆ ಮೂಲಕ ವಿಶ್ವವ್ಯಾಪಿ ಜ್ಞಾನ ಪಸರಿಸಿದೆ, ವಿನೂತನ ಸಾಧನೆ ಮಾಡಿದೆ. ಕನ್ನಡ ನಾಡು ಮಠ ಮಾನ್ಯಗಳ ನಾಡು. ಪರಂಪರೆಯ ಮಹಾಕೊಂಡಿಯಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಸೇವೆ ಸಲ್ಲಿಸಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದೆ ಎಂದು ಬಣ್ಣಿಸಿದರು.
ಪ್ರಧಾನ ಮಂತ್ರಿ ಮೋದಿ ಅವರಿಗೂ ಕೂಡ ಮೈಸೂರು ಭಾಗದ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ. ಹಾಗೆಯೇ ಅಮಿತ್ ಶಾ ಅವರು ಗೃಹ ಮಂತ್ರಿಯಾಗಿ ಮಾತ್ರವಲ್ಲ, ಮಠದ ಸದ್ಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಅತಿಹೆಚ್ಚು ಮಾರ್ಗದರ್ಶನ ಮಾಡಿದವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಸುತ್ತೂರು ಶ್ರೀಗಳು ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ ಅಮಿತ್ ಶಾ ಸಂಕಲ್ಪ ಮಾಡಿದ್ದಾರೆ. ಜಮ್ಮು ಕಾಶ್ಮೀರ ಆರ್ಟಿಕಲ್ಸ್ 370 ರದ್ದು ಆಗಿರುವುದೇ ಅಭಿವೃದ್ಧಿಯ ಸಂಕೇತ. ಅಂತಹವರ ಆಗಮನದಿಂದ ಇಡೀ ರಾಜ್ಯದಲ್ಲಿ ಸಂಚಲನ ಉಂಟುಮಾಡಿತು. ಅದು ರಾಜಕೀಯ ಮಾತ್ರ ಅಲ್ಲ, ಎಲ್ಲ ಹಂತದಲ್ಲಿಯೂ ಉಂಟಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಜೀವನದ ಪುನರುಜ್ಜೀವನ:
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವ ಆರು ದಿನಗಳಿಂದ ಶ್ರದ್ಧಾ ಭಕ್ತಿಗಳಿಂದ ನಡೆದಿದೆ. ಶ್ರೀಗಳ ಕೃಪೆ ನಿರಂತರವಾಗಿ ಭಕ್ತರಿಗೆ ದೊರೆಯುತ್ತಿದೆ. ಆಧ್ಯಾತ್ಮಿಕ, ಧಾರ್ಮಿಕ ಜೊತೆಗೆ ಗ್ರಾಮೀಣ ಜನರ ಜೀವನಗಳನ್ನು ಪುನರುಜ್ಜೀವನ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದರು.
ಸುತ್ತೂರಿನ ಜಾತ್ರಾ ಕಾರ್ಯಕ್ರಮ ತಮ್ಮ ತವರು ಮನೆಯ ಕಾರ್ಯಕ್ರಮ ಎಂದು ಅಪಾರ ಭಕ್ತರು ಭಾಗವಹಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪರಮಪೂಜ್ಯರು ಮಠವನ್ನು ಬೆಳೆಸಿರುವುದನ್ನು ನಾವು ಸ್ಮರಿಸಬಹುದು ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರು ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡುವ ನಿರ್ಧಾರ ಮಾಡಿ, ಕಲ್ಪಿಸಿಕೊಟ್ಟಿದ್ದಾರೆ. ಕಳೆದ ವರ್ಷವೇ ಉದ್ಘಾಟನೆ ಆಗಬೇಕಿತ್ತು ಎಂದ ಅವರು, ದೈವೆಚ್ಚೆಯಂತೆ ಇಂದು ಅವರ ಹಸ್ತದಿಂದಲೇ ಉದ್ಘಾಟನೆ ಆಗಿರುವುದು ಸಂತೋಷದ ಸಂಗತಿ ಎಂದರು.
ಅಮಿತ್ ಶಾ ಅವರು ದೇಶದ ಹಿಂದಿನ ದೊಡ್ಡ ಶಕ್ತಿಯಾಗಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತೆ ಹಾಗೂ ಚಾಣಕ್ಯನ ಶಕ್ತಿ ಹೊಂದಿರುವವರು. ದೇಶದ ಏಕತೆ, ಸಮಗ್ರತೆ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಅಮಿತ್ ಶಾ ಅವರು ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವೇದ, ಉಪನಿಷತ್ ಎಲ್ಲವನ್ನೂ ಅಧ್ಯಯನ ಮಾಡಿದ್ದು, ಮೈಸೂರಿನ ಅರಮನೆಯಲ್ಲಿದ್ದ ಪಂಡಿತರಾಗಿದ್ದ ಕೇಶವ ಪಂಡಿತ್ ಅವರಿಣಮದ ಶಿಕ್ಷಣ ಪಡೆದ ಪರಿಣಾಮವಾಗಿ ಅಮಿತ್ ಶಾ ಅವರು ಈ ಮಟ್ಟಿಕ್ಕೆ ಬೆಳೆಯಲು ಕಾರಣವಾಯಿತು ಎಂದು ತಿಳಿಸಿದರು.
ಅರುಣ್ ಅವರ ಬಾಲರಾಮ ಮೂರ್ತಿ ಅಯೋಧ್ಯೆಯಲ್ಲಿ ಉದ್ಘಾಟನೆ ಆಗಿದೆ, ಅವರಿಗೆ ಅದೃಷ್ಟ ಒಲಿದು ಬಂದಿದ್ದು, ಅರುಣ್ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು ಎಂಬುದು ಸಂತಸದ ಸಂಗತಿ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಅಶೋಕ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಜಯೇಂದ್ರ, ಮಾಜಿ ಸಚಿವ ಸಿ.ಟಿ.ರವಿ ಉಪಸ್ಥಿತರಿದ್ದರು.