ಮೋಡ ಬಿತ್ತನೆ: ಮಳೆಯಿಂದ ರೈತರ ಮುಖದಲ್ಲಿ ಮಂಧಹಾಸ

ರಾಯಚೂರು.ನ.೦೭- ಜಿಲ್ಲೆಯಲ್ಲಿ ಎನ್.ಎಸ್.ಬೋಸರಾಜು ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಮೋಡ ಬಿತ್ತನೆ ಎರಡನೆ ದಿನ ಮುಂದುವರೆದಿದೆ. ಮೊದಲ ದಿನದ ಮೋಡ ಬಿತ್ತನೆ ಮಾಡಿದ ಪರಿಣಾಮ ರಾಯಚೂರು ಸೇರಿ ಜಿಲ್ಲೆಯ ಮಾನ್ವಿ, ಸಿರವಾರ, ಸಿಂಧನೂರು, ಲಿಂಗಸಗೂರು, ದೇವದುರ್ಗ ಸೇರಿ ಜಿಲ್ಲೆಯಾದ್ಯಂತ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದ್ದು, ಮಳೆಗಾಗಿ ಕಾದಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ರಾಯಚೂರು ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಎನ್‌ಎಸ್ ಬೋಸರಾಜು ಫೌಂಡೇಶನ್ ನಿಂದ ಹಮ್ಮಿಕೊಂಡಿದ್ದ ಮೋಡ ಬಿತ್ತನೆ ಕಾರ್ಯ ಎರಡನೇ ದಿನವೂ ಮುಂದುವರೆದಿದೆ. ಮೊದಲ ದಿನದ ಮೋಡ ಬಿತ್ತನೆಯಿಂದ ಜಿಲ್ಲೆಯ ಕೆಲ ಭಾಗದಲ್ಲಿ ಮಳೆಯಾಗುತ್ತಿದೆ. ರಾಯಚೂರ ನಗರ ಕೇಂದ್ರ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಕಲ್ಮಲ್, ಕುರ್ಡಿ, ಯರಗೇರಾ, ಬಿಜನಗೇರಾ ಹಾಗೂ ಮಾನ್ವಿ ತಾಲೂಕಿನ ನೀರಮಾನ್ವಿ, ಕೊಟನೇಕಲ್, ಪೋತ್ನಾಳ ಹಾಗೂ ಸಿರವಾರ ಕಲ್ಲೂರು, ಅತ್ತನೂರು ಕೆ. ಗುಡದಿನ್ನಿ, ಹಣಗಿ, ಪಾತಾಪೂರು, ಕವಿತಾಳ ಸೇರಿದಂತೆ ಸಾಧಾರಣ ಮಳೆಯಾಗುತ್ತಿದೆ.
ಅಲ್ಲದೆ ಮಸ್ಕಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ರೈತರು ಬಿತ್ತಿದ್ದ ಬೆಳೆದು ನಿಂತ ಬೆಳೆಗಳಾದ ಮೆಣಸಿನ ಕಾಯಿ, ಹತ್ತಿ, ಕಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಬಹಾಳ ಅನುಕೂಲವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ನೇತೃತ್ವದಲ್ಲಿ ಎನ್.ಎಸ್.ಬೋಸರಾಜು ಫೌಂಡೇಶನ್‌ನಿಂದ ನಡೆದ ಮೋಡ ಬಿತ್ತನೆಯ ಸಾಮಾಜಿಕ ಕಾರ್ಯಕ್ಕೆ ಜಿಲ್ಲೆಯಾದ್ಯಂತ ರೈತರು ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.