ಮೋಟರ್ ಲಿಪ್ಟಿಂಗ್ ವಾಹನಗಳಿಗೂ ವಿಮೆ ಸೌಲಭ್ಯ: ಕಾರ್ಮಿಕರ ರಕ್ಷಣೆ ಒತ್ತು: ನಾಗೇಶ್

ಚಾಮರಾಜನಗರ, ಜೂ.27:- ವೃತ್ತಿ ನಿರತ ರೈತ ಮಿತ್ರ ಎಲೆಕ್ಟ್ರಿಕಲ್, ಮೋಟಾರ್ ರೀವೈಂಡಿಂಗ್ ಹಾಗೂ ಲಿಪ್ಟಿಂಗ್ ಕಾರ್ಮಿಕರ ಹಿತ ರಕ್ಷಣೆ ಹಾಗೂ ಕುಟುಂಬದ ಭದ್ರತೆಗಾಗಿ ಸಂಘ ಅತ್ಯವಶ್ಯವಾಗಿದ್ದು, ಸಂಘವನ್ನು ಆಧಿಕೃತ ನೋಂದಾವಣಿ ಮಾಡಿಸಿ, ಸದ್ಯದಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ಉದ್ಘಾಟನೆ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಗೌಡಿಕೆ ಪಿ. ನಾಗೇಶ್ ತಿಳಿಸಿದರು.
ತಾಲೂಕಿನ ನಂಜೇದೇವನಪುರದಲ್ಲಿ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಸಾರಿಗೆ ಹಾಗೂ ಪೊಲೀಸ್ ಇಲಾಖೆಯಿಂದ ವೃತ್ತಿ ಬಾಂಧವ್ಯರಿಗೆ ಆಗುತ್ತಿದ್ದ ತೊಂದರೆಯಿಂದ ಪಾರಾಗುವ ಬಗ್ಗೆ ಚರ್ಚೆ ಮಾಡಿ ಎಲ್ಲರು ಒಟ್ಟಿಗೆ ಸೇರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾದೆವು. ಅಲ್ಲದೇ ಮೋಟರ್ ಲಿಪ್ಟಿಂಗ್ ಮಾಡುವ ವಾಹನಗಳಿಗೆ ವಾಹನ ವಿಮೆ ಹಾಗೂ ಪರವಾನಗಿ ಇಲ್ಲದೇ ಬಹಳ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಸರ್ಕಾರ ಗಮನ ಸೆಳೆಯಲು ಕಾರ್ಯಸೂಚಿಯನ್ನು ಹಾಕಿಕೊಂಡು ಹೋರಾಟ ಆರಂಭಿಸಿದವು.
ಕಾರ್ಮಿಕರ ರಕ್ಷಣೆಯು ಸಹ ಕಷ್ಟವಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಮುಖ್ಯ. ಸಂಘಟಿತರಾಗಿ ಹೋಗುವ ಮೂಲಕ ನಮ್ಮ ರಕ್ಷಣೆಯನ್ನು ನಾವೆ ಮಾಡಿಕೊಳ್ಳಬೇಕೆಂದು ಸಾರಿಗೆ ಸಚಿವರು, ಸಾರಿಗೆ ಆಯುಕ್ತರು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ. ಆರ್‍ಟಿಓ ಮೂಲಕ ವಾಹನಗಳಿಗೆ ಅನುಮತಿ ದೊರೆಯುವಂತೆ ಮಾಡಿಕೊಳ್ಳುವಲ್ಲಿ ಮುಂದಾಗಿದ್ದೇವೆ ಎಂದರು.
ಸುತ್ತೂರು ಶ್ರೀಗಳ ಆರ್ಶೀವಾದ ಹಾಗೂ ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಒತ್ತಾಸೆಯಿಂದ ಸಾರಿಗೆ ಇಲಾಖೆಯಲ್ಲಿ ಮೋಟರ್ ಲಿಪ್ಟಿಂಗ್ ಮಾಡುವ ವಾಹನಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಆದೇಶವಾಗಿದೆ. ತಾಂತ್ರಿಕವಾಗಿ ಪರಿಶೀಲನೆ ಬಳಿಕ ರಾಜ್ಯದಾದ್ಯಂತ ಎಲ್ಲಾ ಮೋಟರ್ ಲಿಫ್ಟಿಂಗ್ ವಾಹನಗಳು ವಿಮೆ ವ್ಯಾಪಿಗೆ ಬರುತ್ತಿವೆ. ಚಾಮರಾಜನಗರ ಮೈಸೂರು ಭಾಗದ ಕಾರ್ಮಿಕರ ಹೋರಾಟ ಫಲದಿಂದ ಇದು ಸಾಧ್ಯವಾಗಿದೆ. ಸದ್ಯದಲ್ಲಿಯೇ ನಮ್ಮ ವಾಹನಗಳಿಗೆ ವಿಮೆ ಮಾಡುವಂತೆ ಆರ್‍ಟಿಓಗಳಿಗೆ ಆದೇಶ ಬರುತ್ತವೆ ಎಂದು ನಾಗೇಶ್ ಸಭೆಗೆ ಸಿಹಿ ಸುದ್ದಿ ನೀಡಿದರು.
ಜುಲೈನಲ್ಲಿ ಸಂಘ ಉದ್ಘಾಟನೆ : ರೈತ ಮಿತ್ರ, ಎಲೆಕ್ಟ್ರಿಕಲ್, ಮೋಟಾರ್ ರೀವೈಂಡಿಂಗ್ ಹಾಗೂ ಲಿಪ್ಟಿಂಗ್ ಕಾರ್ಮಿಕರ ಸಂಘವನ್ನು ತಾತ್ಕಾಲಿಕವಾಗಿ ರಚನೆ ಮಾಡಿಕೊಂಡು ಐದು ತಾಲೂಕುಗಳಲ್ಲಿಯು ತಾಲೂಕು ಸಂಘಗಳನ್ನು ರಚನೆ ಮಾಡಿದ್ದೇವೆ. ಈಗ ಸಂಘವನ್ನು ನೊಂದಾಣಿ ಮಾಡಿ, ಅಧಿಕೃತವಾಗಿ ಜುಲೈ ತಿಂಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ, ಸಂಘವನ್ನು ಉದ್ಗಾಟನೆ ಮಾಡಲು ಸಂಘದ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆ ನೀಡುವ ಲೇಬರ್ ಕಾರ್ಡುಗಳನ್ನು ಪಡೆದುಕೊಂಡು ಸಂಘದ ಸದಸ್ಯರಾಗಬೇಕು. ಸರ್ಕಾರ ಹಾಗು ಕಾರ್ಮಿಕ ಇಲಾಖೆಯಿಂದ ಅನೇಕ ಸವಲತ್ತುಗಳು ಪಡೆದುಕೊಳ್ಳಲು ಇದು ಸಹಕಾರಿಯಾಗುತ್ತದೆ. ಹೀಗಾಗಿ ಎಲ್ಲಾ ಕಾರ್ಮಿಕರು ಸಹ ಕಾರ್ಮಿಕ ಇಲಾಖೆಯ ಅಧೀನಕ್ಕೆ ಒಳಪಟ್ಟು ಕಾರ್ಡುಗಳನ್ನು ಪಡೆದುಕೊಳ್ಳಬೇಕು ಎಂದು ನಾಗೇಶ್ ತಿಳಿಸಿದರು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಕೋಣನಪುರ, ಖಜಾಂಚಿ ಕಾಳನಹುಂಡಿ ರೇವಣ್ಣ, ಉಪಾಧ್ಯಕ್ಷರಾದ ಜಾಹೀರ್, ನಾಗೇಂದ್ರ ತೆರಕಣಾಂಬಿ, ಚಾ.ನಗರ ರಾಮಣ್ಣ, ಪಿ. ಮರಹಳ್ಳಿ ರಾಜಶೇಖರ್, ಹನೂರು ಮಹದೇವ್, ಗುಂಡ್ಲುಪೇಟೆ ಗುರುಸ್ವಾಮಿ, ಅರಕಲವಾಡಿ ಮಹೇಶ್, ಮೈಸೂರು ಜಿಲ್ಲಾ ಸಂಘ ಅಧ್ಯಕ್ಷ ಪ್ರಭುಸ್ವಾಮಿ, ಅನ್ಸಾರ್, ಕುಮಾರ್, ಸಿದ್ದರಾಜು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.