ಮೋಜು ಮಸ್ತಿ ಮಾಡಲು ಸುಲಿಗೆ, ದರೋಡೆ: ಇಬ್ಬರ ಬಂಧನ

ಕಲಬುರಗಿ,ಆ.7-ಜೇವರ್ಗಿ ರಸ್ತೆಯ ವಾಜಪೇಯಿ ಬಡಾವಣೆಯಿಂದ ಕೆಸರಟಗಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕೆಲವರು ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸ್‍ಐ ಅಶೋಕ ರಾಠೋಡ್, ಸಿಬ್ಬಂದಿಗಳಾದ ಪ್ರಕಾಶ, ಮಂಜುನಾಥ, ಸುಲ್ತಾನ್, ವಿಶ್ವನಾಥ ಮತ್ತು ಪ್ರೀತಮ್ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮೂವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕೋರವಾರ ಗ್ರಾಮದ ಇಮ್ರಾನ್ ವಗ್ದಲವಾಲೆ (20) ಮತ್ತು ಆಳಂದ ತಾಲ್ಲೂಕಿನ ಕಡಗಂಚಿಯ ಅಲ್ತಾಫ್ ಉಪಾರ್ (20) ಎಂಬುವವರನ್ನು ಬಂಧಿಸಿ 1 ಹರಿತವಾದ ಮಚ್ಚು, ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಟ್ಟೆ, ಖಾರದ ಪುಡಿ, ಮೂರು ಬಡಿಗೆ, 20 ಅಡಿ ಉದ್ದದ ಹಗ್ಗ, 40 ಸಾವಿರ ರೂ.ಬೆಲೆ ಬಾಳುವ ಕಳ್ಳತನ ಮಾಡಿದ್ದ 2 ಬೈಕ್ ಜಪ್ತಿ ಮಾಡಿದ್ದಾರೆ.
ಕಲಬುರಗಿ ನಗರದ ಡಬರಾಬಾದ್‍ನ ಶೇರ್ ಅಲಿ ಅಲಿಯಾಸ್ ಶ್ರೇಯಾ ಶೇಖ್ ರಾಜಿಸಾಬ ಕಡಗಂಚಿ (23), ಫಾರುಕ್ ಇಮ್ರಾನ್ (20) ಮತ್ತು ಸೋಯಬ್ ಅಬ್ದುಲ್ ಖಾಜಾ (22) ಎಂಬುವವರು ಪರಾರಿಯಾಗಿದ್ದಾರೆ.
ಮೋಜು ಮಸ್ತಿ ಮಾಡಲು ಹಣದ ಅವಶ್ಯಕತೆ ಇರುವುದರಿಂದ ಸುಲಿಗೆ, ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.