
ಬೆಂಗಳೂರು, ಮೇ.೧೧- ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಪರಿಣಾಮ ರಾಜ್ಯದ ಹಲವು ಜಿಲ್ಲೆಗಲ್ಲಿ ಸೈಕ್ಲೋನ್ ಭೀತಿ ಎದುರಾಗಿದ್ದು ಮುಂದಿನ ೨೪ ಗಂಟೆಗಳ ಅವಧಿಯಲ್ಲಿ ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇಂದಿನಿಂದ ೩ ದಿನಗಳ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ಅದೇ ರೀತಿ, ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳಬಾಡಿನ ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇನ್ನೂ, ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳ ಕಾಲ ಮಳೆ ಬಿಡುವು ನೀಡಿದ್ದು, ಇಲ್ಲಿ ಸದ್ಯ ಮೋಡ ಕವಿದ ವಾತಾವರಣ ಮರೆಯಾಗಿ ಬಿಸಿಲಿನ ತಾಪಮಾನ ಮತ್ತೆ ಹೆಚ್ಚಾಗುತ್ತಿದೆ. ಹಾಗೆಯೆ ಇಂದು ಕೂಡ ನಗರದಲ್ಲಿ ಯಾವುದೇ ಮಳೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ, ಬದಲಾಗಿ ಬಿಸಿಲಿನ ವಾತಾವರಣ ಮುಂದುವರೆದಿದೆ.
ಒಟ್ಟಿನಲ್ಲಿ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಆದರೂ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ ಎನ್ನುವ ಮಾಹಿತಿಯನ್ನು ನೀಡಿದೆ.