
ಯಾಂಗಾನ್ (ಮ್ಯಾನ್ಮಾರ್), ಮೇ ೧೬- ಗಂಟೆಗೆ ಬರೊಬ್ಬರಿ ೨೦೯ ಕಿ.ಮೀ ವೇಗದ ಗಾಳಿಯೊಂದಿಗೆ ಮೋಚಾ ಚಂಡಮಾರುತ ಈಗಾಗಲೇ ಮ್ಯಾನ್ಮಾರ್ ನ ರಾಖೈನ್ ರಾಜ್ಯಕ್ಕೆ ಅಪ್ಪಳಿಸಿದ್ದು, ಇದುವರೆಗೆ ಸುಮಾರು ೨೯ ಮಂದಿ ಮೃತಪಟ್ಟಿದ್ದು, ೭೦೦ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಕಳೆದ ಒಂದು ದಶಕದಲ್ಲಿ ಬಂಗಾಲ ಕೊಲ್ಲಿಗೆ ಅಪ್ಪಳಿಸಿದ ಅತೀ ದೊಡ್ಡ ಚಂಡಮಾರುತವಾಗಿದೆ.
ಪಶ್ಚಿಮ ಮ್ಯಾನ್ಮಾರ್ ಕರಾವಳಿ ತೀರಕ್ಕೆ ನುಗ್ಗಿಬಂದಿರುವ ಸಮುದ್ರದ ನೀರಿನಲ್ಲಿ ಸುಮಾರು ೧,೦೦೦ ಜನರು ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಮಂದಿಯನ್ನು ಮಠ, ಮಂದಿರ ಮತ್ತು ಶಾಲೆಗಳಿಗೆ ಸ್ಥಳಾಂತರಿಸಲಾಗಿತ್ತು. ಗಾಳಿಯ ರಭಸಕ್ಕೆ ಸಿಲುಕಿದ ಹಲವು ವಿದ್ಯುತ್ ಕಂಬಗಳು, ಮೊಬೈಲ್ ಟವರ್‍ಗಳು ನೆಲಕ್ಕುರುಳಿದ್ದು ದೇಶದಾದ್ಯಂತ ವಿದ್ಯುತ್ ಮತ್ತು ಸಂವಹನ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಯಿಂದಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು ಕೆಲವೆಡೆ ನೆರೆನೀರು ರಸ್ತೆಗೆ ನುಗ್ಗಿ ಹಲವು ವಾಹನಗಳು ಕೊಚ್ಚಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯ ನಿವಾಸಿಗಳನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ರಾಖಿನೈ ರಾಜ್ಯದ ಸಿಟ್ವೆ, ಕ್ಯಾಕ್‌ಪ್ಯು ಮತ್ತು ಗವ ನಗರಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್‍ಗಳು, ಮೊಬೈಲ್ ಟವರ್‍ಗಳು, ದೋಣಿಗಳು ಮತ್ತು ದೀಪಸ್ಥಂಭಗಳು ನೆಲಕ್ಕುರುಳಿವೆ. ಯಾಂಗಾನ್‌ನ ಸಮೀಪದ ಕೋಕೊ ದ್ವೀಪದಲ್ಲೂ ವ್ಯಾಪಕ ಹಾನಿ ಸಂಭವಿಸಿದೆ. ಸಿಟ್ವೆ ನಗರದ ಸುಮಾರು ೪ ಸಾವಿರ ನಿವಾಸಿಗಳನ್ನು ನೆರೆಯ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದ್ದರೆ, ೨೦,೦೦೦ಕ್ಕೂ ಅಧಿಕ ಮಂದಿಯನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮ್ಯಾನ್ಮಾರ್ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಯ ಕಚೇರಿಯ ಹೇಳಿಕೆ ತಿಳಿಸಿದೆ. ಮೋಚಾ ಚಂಡಮಾರುತ ಅಪ್ಪಳಿಸಿದ್ದು ಮ್ಯಾನ್ಮಾರ್ ನ ೨ ದಶಲಕ್ಷ ಜನತೆ ಅಪಾಯದಲ್ಲಿದ್ದಾರೆ. ಹಾನಿ ಮತ್ತು ನಾಶ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು ಅಗತ್ಯವಿದ್ದವರಿಗೆ ಎಲ್ಲಾ ರೀತಿಯ ನೆರವು ಒದಗಿಸಲು ಸನ್ನದ್ಧರಾಗಿದ್ದೇವೆ ಎಂದು ಮ್ಯಾನ್ಮಾರ್‍ನಲ್ಲಿ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆಯ ಪ್ರತಿನಿಧಿ ಟಿಟನ್ ಮಿತ್ರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಅತ್ತ ಬಾಂಗ್ಲಾದೇಶದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳನ್ನು ಹೊಂದಿರುವ ನಿರಾಶ್ರಿತರ ಶಿಬಿರಗಳನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಅಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.