
ರಾಖೈನ್ (ಮ್ಯಾನ್ಮಾರ್), ಮೇ ೧೭- ಈಗಾಗಲೇ ಮೋಚಾ ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ಗೆ ಭಾರೀ ಹಾನಿ ಉಂಟಾಗಿದೆ. ಅದರಲ್ಲೂ ಮ್ಯಾನ್ಮಾರ್‌ನಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿ-ಪಾಸ್ತಿ ಹಾನಿ ಸಹಿತ ಜೀವಹಾನಿ ಸಂಭವಿಸಿದೆ. ಸದ್ಯ ದಾಖಲೆಗಳ ಪ್ರಕಾರ ಚಂಡಮಾರುತದ ಪರಿಣಾಮ ಮ್ಯಾನ್ಮಾರ್‌ನಲ್ಲಿ ಮೃತರ ಸಂಖ್ಯೆ ೮೧ಕ್ಕೆ ಏರಿಕೆಯಾಗಿದೆ. ಮೂಲಗಳ ಪ್ರಕಾರ ರಾಖೈನ್ ರಾಜ್ಯದಲ್ಲಿ ೧೦೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಇಲ್ಲಿನ ರಾಖೈನ್ ಪ್ರದೇಶಕ್ಕೆ ಮೋಚಾ ಚಂಡಮಾರುತದ ಅಪ್ಪಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜನವಸತಿ ಪ್ರದೇಶಗಳಲ್ಲಿ ಹಾನಿ ಉಂಟಾಗಿದೆ. ಇದೀಗ ನಿಧಾನವಾಗಿ ಅವಘಡದಿಂದ ಸಾವಿನ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕಾ ದೋಣಿಗಳಿಗೆ ಹಾನಿ ಉಂಟಾಗಿದ್ದು, ಸ್ಥಳೀಯ ನಾಗರಿಕರ ಆರ್ಥಿಕ ಪರಿಸ್ಥಿತಿಗೂ ಹೊಡೆತ ಬಿದ್ದಿದೆ. ಅದರಲ್ಲೂ ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರು ವಾಸಿಸುವ ಬು ಮಾ ಮತ್ತು ಸಮೀಪದ ಖೌಂಗ್ ಡೋಕೆ ಕರ್ ಎಂಬ ರಾಖೈನ್ ರಾಜ್ಯದ ಗ್ರಾಮಗಳಲ್ಲಿ ಕನಿಷ್ಠ ೪೬ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಮ್ಯಾನ್ಮಾರ್ ಸ್ಟೇಟ್ ಬ್ರಾಡ್‌ಕಾಸ್ಟರ್ ಎಂಆರ್‌ಟಿವಿ ಪ್ರಕಾರ, ರಾಖೈನ್‌ನ ರಾಜಧಾನಿ ಸಿಟ್ವೆಯ ಉತ್ತರದಲ್ಲಿರುವ ರಾಥೆಡಾಂಗ್ ಟೌನ್‌ಶಿಪ್‌ನ ಹಳ್ಳಿಯಲ್ಲಿ ಬೌದ್ಧ ಧಾರ್ಮಿಕ ಮಠವೊಂದು ಕುಸಿದು ಬಿದ್ದ ಪರಿಣಾಮ ೧೩ ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಪಕ್ಕದ ಹಳ್ಳಿಯಲ್ಲಿ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಇಲ್ಲಿನ ೧೦೦ಕ್ಕೂ ಹೆಚ್ಚಿನ ನಾಗರಿಕರು ಸದ್ಯ ಕಣ್ಮರೆಯಾಗಿದ್ದು, ಹಾಗಾಗಿ ಮೃತರ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಟ್ವೆ ಬಳಿ ಸ್ಥಳಾಂತರಗೊಂಡ ರೋಹಿಂಗ್ಯಾಗಳಿಗಾಗಿ ದಪಾಯಿಂಗ್ ಶಿಬಿರದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅದರ ನಾಯಕ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದದ್ದಾರೆ. ಸದ್ಯ ಶಿಬಿರದ ಸಂಪರ್ಕ ಕಡಿತಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸರಬರಾಜು ಕೊರತೆಯಿದೆ ಎಂದು ಹೇಳಿದರು. ಮೋಚಾ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಮ್ಯಾನ್ಮಾರ್‌ಗೆ ಅಪ್ಪಳಿಸಿರುವ ಅತ್ಯಂತ ಶಕ್ತಿಶಾಲಿ ಚಂಡಮಾರುತವಾಗಿದೆ. ಇನ್ನು ಮ್ಯಾನ್ಮಾರ್‌ನ ಫೇಸ್‌ಬುಕ್ ಪುಟದಲ್ಲಿನ ತನ್ನ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ, “ತುರ್ತು ವಿಪತ್ತು ಪರಿಹಾರ ನೆರವು ನೀಡಲು ನಾವು ಸಿದ್ಧವಾಗಿದೆ” ಎಂದು ಚೀನಾ ತಿಳಿಸಿದೆ. ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಕ್ಕೆ ಮೋಚಾ ಅಪ್ಪಳಿಸಿದ್ದರೂ ಬಾಂಗ್ಲಾದಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ.