ಮೋಘಾ ಕೆ: ಚುನಾವಣೆ ಬಹಿಷ್ಕರಿಸಿದ ಗ್ರಾ.ಪಂ.ಸದಸ್ಯರು

ಮಾದನಹಿಪ್ಪರಗಿ: ಆ.6:ಇಲ್ಲಿಗೆ ಸಮೀಪದ ಮೋಘಾ ಕೆ ಗ್ರಾಮ ಪಂಚಾಯಿತಿಯ ಎರಡನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಯನ್ನು ಸರ್ವ ಸದಸ್ಯರು ಬಹಿಷ್ಕರಿಸಿದ ಪ್ರಸಂಗ ಇಂದು ನಡೆದಿದೆ.

ಅಲ್ಲಾಪುರ, ಮೋಘಾ(ಬಿ),ಇಕ್ಕಳಕಿ, ಮೋಘಾ(ಕೆ) ಗ್ರಾಮನ್ನೋಳಗೊಂಡ ಪಂಚಾಯಿತಿಯ ಅದ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನಾಮ ಪತ್ರಗಳು ಹಾಕಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇನ್ನೇನು ಮತದಾನ ಶುರುವಾಗುವ ಹೊತ್ತಿನಲ್ಲಿ ಮೋಘಾ ಬಿ. ಗ್ರಾಮದ ಸದಸ್ಯೆ ಲಲಿತಾಬಾಯಿ ಗಂ.ಮಲ್ಕಣ್ಣ ಪಾಟೀಲ ಅವರ ಸದಸ್ಯತ್ವ ರದ್ದುಗೊಂಡಿದ್ದರಿಂದ ಅವರಿಗೆ ಮತದಾನದ ಹಕ್ಕು ಇಲ್ಲವೆಂದು ಚುನಾವಣಾಧಿಕಾರಿಗಳು ತಿಳಿಸಿದರು. ಸದಸ್ಯೆ ಲಲಿತಾಬಾಯಿ ನನಗೆ ಇಂದಿನ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ನೋಟೀಸ್ ನೀಡಲಾಗಿದೆ. ಈಗ ನನ್ನ ಸದಸ್ಯತ್ವ ಹೇಗೆ ರದ್ದಾಗಾಗುತ್ತದೆ ಎಂದು ಪ್ರಶ್ನೆ ಎತ್ತಿದರು. ಇದಕ್ಕೆ ಸರ್ವ ಸದಸ್ಯರು ಕೂಡಾ ಧ್ವನಿಗೂಡಿಸಿದರು. ಹೀಗಾಗಿ ಸರ್ವ ಸದಸ್ಯರು ಇಂದಿನ ಚುನಾವಣಾ ಪ್ರಕ್ರಿಯೆ ನಡೆಸಬಾರದು ಎಂದು ಬಹಿಷ್ಕರಿಸಿ ಹೊರನಡೆದರು. ಸದಸ್ಯರು ನೀಡಿದ ಮನವಿ ಪತ್ರವನ್ನು ತಸಿಲ್ದಾರವರಿಗೆ ತಲುಪಿಸಿ ಮುಂದಿನ ಚುನಾವಣಾ ದಿನಾಂಕ ತಿಳಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಹಿನ್ನಲೆ: ಆಸ್ತಿ ಘೋಷಣಾ ಪ್ರಮಾಣ ಪತ್ರ ನೀಡದ ಸದಸ್ಯೆ ಲಲಿತಾಬಾಯಿ ಮಲ್ಕಣ್ಣ ಪಾಟೀಲವರ ಸದಸ್ಯತ್ವ ಚುನಾವಣಾ ಆಯೋಗವು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಲಲಿತಾಬಾಯಿ ಪಾಟೀಲ ಕಲಬುರಗಿ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ನಂತರ ನ್ಯಾಯಾಲಯವು ಚುನಾವಣಾ ಆಯೋಗದ ಆದೇಶವನ್ನು ಎತ್ತಿ ಹಿಡಿದು ಸದಸ್ಯತ್ವ ರದ್ದು ಮಾಡಲು ಆದೇಶಿಸಿತ್ತು. ಆದರೂ ಚುನಾವಣಾಧಿಕಾರಿಗಳು ಸದಸ್ಯೆ ಲಲಿತಾಬಾಯಿ ಪಾಟೀಲಗೆ ಇಂದಿನ ಚುನಾವಣೆಗೆ ಹಾಜರಾಗಲು ನೋಟೀಸ್ ನೀಡಿದ್ದು ಗೊಂದಲದ ವಾತಾವರಣಕ್ಕೆ ಕಾರಣವಾಗಿತ್ತು. ಮಾದನಹಿಪ್ಪರಗಿ ಪೋಲಿಸ್ ಠಾಣೆಯ ಪಿಎಸ್‍ಐ ದಿನೇಶ, ಹಾಗೂ ಸಿಬ್ಬಂಧಿಗಳು ಯಾವುದೇ ರೀತಿಯ ಗದ್ದಲಕ್ಕೆ ಅನುವು ಮಾಡಿಕೊಡಲಿಲ್ಲ. ಕಂದಾಯ ನಿರೀಕ್ಷಕ ರಾಜಕುಮಾರ ಸರಸಂಬಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜೂರ ಪಟೇಲ್ ಹಾಜರಿದ್ದರು.