ಮೋಕಾ ಮನೆಗಳೆಲ್ಲೆಲ್ಲ ನೀರು
ಜನ ಸಂಕಷ್ಟ ಆಲಿಸಿದ ಶಾಸಕ ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ.3- ಕಳೆದ ಎರೆಡುದಿನಗಳ‌ ಕಾಲ ಸುರಿದ ಮಳೆಯಿಂದ ತಾಲೂಕಿನ ಹೊಸಮೋಕಾ ಗ್ರಾಮದಲ್ಲಿ ಹಳ್ಳದ ನೀರು ಮನೆಗಳಿಗೆಲ್ಲ ನುಗ್ಗಿ ಅಲ್ಲಿನ ನಿವಾಸಿಗಳ ಬದುಕು ಅತಂತ್ರವಾಗಿದೆ. ಸ್ಥಳಕ್ಕೆ ನಿನ್ನೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು, ಬಿ.ಡಿ.ಹಳ್ಳಿಯ ಹಿರಿಯ  ಮುಖಂಡ ಸತ್ಯನಾರಾಯಣ ರೆಡ್ಡಿ ಅವರೊಂದಿಗೆ  ಭೇಟಿ ನೀಡಿ ಪರಿಶೀಲಿಸಿ. ಸಂಕಷ್ಟದ ಜನರ ನೋವಿಗೆ ಸ್ಪಂದಿಸಿದ್ದಾರೆ.
ತಾಲೂಕಿನ ಚಾಗನೂರು, ಇಬ್ರಾಹಿಂಪುರ, ವೈ.ಕಗ್ಗಲ್ಲು, ಸಿಡಗಿನಮೊಳ ಮೊದಲಾದ ಗ್ರಾಮಗಳಲ್ಲೂ ಮನೆಗಳಿಗೆ ನೀರು ನುಗ್ಗಿದೆ.
ಹೊಸಮೋಕಾ ಬಳಿ ಹರಿಯುವ ಹಳ್ಳವನ್ನು ಒತ್ತುವರಿ ಮಾಡಿರುವುದು ಮತ್ತು ಕೃಷಿಗಾಗಿ ನೀರು ಬಳಕೆ ಮಾಡಲು ಅಲ್ಲಲ್ಲಿ ಅಡ್ಡಕಟ್ಟಲಾಗಿದೆ.  ಇದರಿಂದ ಕಳೆದ ಎರೆಡು ದಿನದಲ್ಲಿ ಬಿದ್ದ 220 ಮಿಲಿ.ಮೀಟರ್ ಮಳೆಯಿಂದಾಗಿ ಒಮ್ಮೆಲೆ ನೀರಿನ‌ಹರಿವು ಹೆಚ್ಚಾಗಿ ಹಳ್ಳದ ನೀರು ಗ್ರಾಮದ ಮನೆಗಳಿಗೆ ನುಗ್ಗಿದೆ. ನಡುವಿನ‌ಮಟ್ಟ ನೀರು‌ನುಗ್ಗಿರುವುದರಿಂದ ಮನೆಗಳಲ್ಲಿನ ಸಾಮಾನುಗಳೆಲ್ಲ ಹಾಳಾಗಿವೆ. ಕೆಲ‌ಮನೆಗಳಿಂದ ಕೊಚ್ಚಿಕೊಂಡು ಹೋಗಿವೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಾಸಕರು ನಿರಾತ್ರಿತರಾದ ಜನತೆಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿ ಅವರಿಗೆ ದವಸ ಧಾನ್ಯದ ನೆರವನ್ನು ನೀಡಿರುವುದಾಗಿ ಹೇಳಿದ್ದಾರೆ.
ಮಳೆ ಹಾನಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮಳೆಯಿಂದಾಗಿ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಕೊಚ್ಚಿಹೋಗಿದೆ. ಬೆಳೆ ಕಳೆದುಕೊಂಡವರಿಗೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕರು  ನೀಡಿದ್ದಾರೆ.
ತೋಟದಲ್ಲಿ ಹೂವು ಕೀಳಲು ಹೋಗಿ ವೇದಾವತಿಯ ನದಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಭೀತಿಯಲ್ಲಿದ್ದ. ವೈ.ಕಗ್ಗಲ್ ನ 24 ಜನರನ್ನು ಶಾಸಕ ಬಿ.ನಾಗೇಂದ್ರ ರವರು ಫಯರ್ ಬ್ರಿಗೇಡ್ ಮತ್ತು ಪೊಲೀಸರ ತಂಡ ಮೂಲಕ ರಕ್ಷಣೆ ಮಾಡಿಸಿದ್ದಾರೆ.‌