ಮೊಹ್ಮದ್ ಪೈಗಂಬರ್ ಅವಹೇಳನ: ಫ್ರಾನ್ಸ್ ಅಧ್ಯಕ್ಷರ ವಜಾಕ್ಕೆ ಆಗ್ರಹಿಸಿ ಉದ್ರಿಕ್ತರಿಂದ ಪ್ರತಿಭಟನೆ

ಕಲಬುರಗಿ,ನ.12: ಮೊಹ್ಮದ್ ಪೈಗಂಬರ್ ಅವರ ಕುರಿತು ಹಾಗೂ ಇಸ್ಲಾಂ ಧರ್ಮದ ಕುರಿತು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರೇನ್ ವಿರುದ್ಧ ರಜಾ ಅಕ್ಯಾಡೆಮಿಯ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಮುದಾಯದ ಉದ್ರಿಕ್ತ ಕಾರ್ಯಕರ್ತರು ಗುರುವಾರ ನಗರದ ಮುಸ್ಲಿಂ ಚೌಕ್‍ನಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು. ಪ್ರತಿಭಟನೆಕಾರರು ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರೇನ್ ಅವರು ಧರ್ಮಾಂಧ ನೀತಿಯ ಮೂಲಕ ಸ್ವಯಂ ವಿನಾಶದ ಯೋಜನೆ ಬಿಚ್ಚಿಟ್ಟಿದ್ದಾರೆ. ಅಂತಹ ಮನೋರೋಗಿಯಿಂದಾಗಿ ಇಡೀ ಫ್ರಾನ್ಸ್ ಅಸ್ತಿತ್ವಕ್ಕೆ ಗಂಭೀರ ಬೆದರಿಕೆಯಾಗಿದೆ. ಫ್ರಾನ್ಸ್ ಅಧ್ಯಕ್ಷರನ್ನು ವಜಾಗೊಳಿಸುವುದೊಂದೇ ಅಲ್ಲಿನ ಜನರ ಏಕೈಕ ಕೆಲಸವಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.
ಈಗಾಗಲೇ ಭಗವಂತನ ಕೋಪದಿಂದ ಕೋವಿಡ್-19 ಸೋಂಕು ಭೀತಿ ಆವರಿಸಿದೆ. ಫ್ರಾನ್ಸ್ ಅಧ್ಯಕ್ಷರು ಧರ್ಮ ಗುರುವಿನ ಕುರಿತು ಅವಹೇಳನ ಮಾಡಿದಲ್ಲಿ ಇಂತಹ ಸೋಂಕು ಇನ್ನಷ್ಟು ಹೆಚ್ಚಾಗಲಿದೆ ಎಂದು ಪ್ರತಿಭಟನೆಕಾರರು ಕಳವಳ ವ್ಯಕ್ತಪಡಿಸಿದರು.
ಇಡೀ ವಿಶ್ವದಲ್ಲಿ ಮುಸ್ಲಿಂ ಬಾಂಧವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಿರ್ದಯ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಪ್ರಾನ್ಸ್ ಇಂತಹ ಕೃತ್ಯಗಳಿಂದ ಹೊರಬರದೇ ಇದ್ದಲ್ಲಿ ಇಂತಹ ಪ್ರತಿಭಟನೆಗಳು ಇನ್ನೂ ಹೆಚ್ಚಲಿವೆ. 2 ಮಿಲಿಯನ್ ಮುಸ್ಲಿಂರ ಸುನಾಮಿಯು ಫ್ರಾನ್ಸ್‍ನ್ನು ಪ್ರಪಂಚದಿಂದ ದೂರ ತೆಗೆದುಕೊಂಡು ಹೋಗುತ್ತದೆ ಎಂದು ಅವರು ಎಚ್ಚರಿಸಿದರು.
ಕೂಡಲೇ ಫ್ರಾನ್ಸ್ ಅಧ್ಯಕ್ಷರು ಮೊಹ್ಮದ್ ಫೈಗಂಬರ್ ಹಾಗೂ ಇಸ್ಲಾಂ ಧರ್ಮದ ಕುರಿತು ಅವಹೇಳನ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.