ಕಲಬುರಗಿ,ಜು.30-ಮೊಹರಂ ಹಬ್ಬದ ವೇಳೆ ಕಲ್ಲು ತೂರಾಟ ನಡೆದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬದ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಎರಡೂ ಕುಟುಂಬದ ಎಂಟು ಜನರಿಗೆ ಗಾಯಗಳಾಗಿವೆ.
ಎರಡು ಕುಟುಂಬಗಳು ಕೂಡಾ ಒಂದೇ ಜಾತಿಗೆ ಸೇರಿದ್ದು, ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಿಂದ ಈ ಎರಡು ಕುಟುಂಬಗಳು ನಡುವೆ ದ್ವೇಷ ಬೆಳೆದಿತ್ತು ಎನ್ನಲಾಗಿದೆ.
ನಿನ್ನೆ ಸಂಜೆ ಮೋಹರಂ ಹಬ್ಬ ಆಚರಿಸುತ್ತಿದ್ದ ವೇಳೆ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಇದಕ್ಕೂ ಮೊಹರಂ ಹಬ್ಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.