ಸಂಜೆವಾಣಿ ವಾರ್ತೆ
ಸಿರಿಗೇರಿ ಜು 28. ಮೊಹರಮ್ ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ಮಡಕೆ (ಗಡಿಗೆ)ಗಳ ಮತ್ತು ಪೂಜಾ ಸಾಮಾಗ್ರಿಗಳ ವ್ಯಾಪಾರವು ಜೋರಾಗಿ ನಡೆಯಿತ್ತಿರುವುದು ಕಂಡುಬಂತು. ಸತತ ನಾಲ್ಕು ದಿನಗಳಿಂದ ಮೋಡ ಮುಚ್ಚಿಕೊಂಡು ತುಂತುರು ಮಳೆಯ ಸಿಂಚನದಿಂದ ಮಂಕಾಗಿದ್ದ ಜನರಲ್ಲಿ ಇಂದು ಬೆಳಿಗ್ಗೆ ಸೂರ್ಯ ದರ್ಶನವಾಗುತ್ತಿದ್ದಂತೆ ಮೊಹರಂ ಹಬ್ಬದ ಆಚರಣೆಗೆ ಹುರುಪು ನೀಡಿತ್ತು. ಇಂದು ಕತಲ್ ರಾತ್ರಿಯ ಪ್ರಯುಕ್ತ ಹರಕೆ ಹೊತ್ತುಕೊಂಡ ಭಕ್ತಾದಿಗಳು ಪೀರಲ ದೇವರುಗಳಿಗೆ ಬೆಲ್ಲದ ನೀರು ನೈವೇದ್ಯ, ಕೆಂಪು ಸಕ್ಕರೆ ಓದಿಕೆ ಮಾಡಿಸುವ ಸಂಪ್ರದಾಯವನ್ನು ಇಂದು ಸಂಜೆ ನಡೆಸುತ್ತಾರೆ. ರಾತ್ರಿ 12ಗಂಟೆಯಿಂದ ಪೀರಲದೇವರು ಮಸೀದಿಗಳಲ್ಲಿ ವಿಶೇಷ ಓದಿಕೆ ಪ್ರಾರ್ಥನೆ ನಡೆಸಿ ದೇವರುಗಳನ್ನು ಹೊತ್ತು ವಠಾರದಲ್ಲಿ ಸುತ್ತಾಡಿ ಬರುವುದು, ಮೌಲಾಲಿ ದರ್ಗಾಕ್ಕೆ ಹೋಗಿಬರುವ ಪ್ರತೀತಿಯನ್ನು ನಡೆಸಲಾಗುತ್ತದೆ. ಇಂದು ಸಂಜೆ ಬೆಲ್ಲದ ಹಾಲು ಬಿಂದಿಗೆ ತೆಗೆದುಕೊಂಡು ಹೋಗಲು ಭಕ್ತರು ಬೆಳಿಗ್ಗೆ ಕುಂಬಾರಣ್ಣ ಮಾರುವ ಗಡಿಗೆ, ಬಿಂದಿಗೆಗಳನ್ನು ಖರೀದಿಸಿದರು. ಇತರೆ ಹರಕೆಯ ಕುದುರೆ, ಹರಕೆವಸ್ತ್ರ, ಕೆಂಪುಸಕ್ಕರೆ ಖರೀದಿಯೂ ನಡೆಯಿತು. ಮಳೆಯ ಮೂಡಿನಿಂದ ಹೊರಬಂದ ಗ್ರಾಮೀಣ ಜನರು ಮೊಹರಂ ಆಚರಣೆ ಮೂಡ್‍ಗೆ ಬಂದಿರುವುದು ಅವರ ಸಡಗರದಲ್ಲಿ ಕಾಣುತ್ತಿತ್ತು.