
ಮೆಲ್ಬೊರ್ನ್ (ಆಸ್ಟ್ರೇಲಿಯಾ), ಮೇ ೩- ಸ್ನೇಹಿತರೊಂದಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿ, ಎಲ್ಲರ ಅಚ್ಚರಿಗೆ ಕಾರಣವಾಗಿದ್ದ ವ್ಯಕ್ತಿಯೊಬ್ಬರ ಕಳೇಬರ ಇದೀಗ ಮೊಸಳೆ ದೇಹದೊಳಗೆ ಪತ್ತೆಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಕೆವಿನ್ ಡಾರ್ಮೊಡಿ (೬೫) ಎಂದು ಗುರುತಿಸಲಾಗಿದೆ. ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಪ್ರಸಿದ್ಧ ಉಪ್ಪುನೀರಿನ ಮೊಸಳೆ ಆವಾಸಸ್ಥಾನ ಎಂದೇ ಗುರುತಿಸಿಕೊಂಡಿರುವ ಕೆನಡಿಸ್ ಬೆಂಡ್‌ನಲ್ಲಿ ಶನಿವಾರದಂದು ಕೆವಿನ್ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆ ಬಳಿಕ ಕೆವಿನ್ ನಾಪತ್ತೆಯಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಬಳಿಕ ಅದೇ ಘಟನಾ ಸ್ಥಳದಲ್ಲಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದರು. ಅಲ್ಲದೆ ಅಲ್ಲಿನ ಎರಡು ಭಾರೀ ಗಾತ್ರದ ಮೊಸಳೆಗಳನ್ನು ಹಿಡಿದು, ದಯಾಮರಣಗೊಳಿಸಿದಾಗ ದೇಹದಲ್ಲಿ ವ್ಯಕ್ತಿಯೊಬ್ಬರ ಕಳೇಬರ ಪತ್ತೆಯಾಗಿದೆ. ಆದರೆ ಇದು ಕೆವಿನ್ ಅವರ ಮೃತದೇಹ ಎಂದು ಇನ್ನೂ ಅಧಿಕೃತಗೊಂಡಿಲ್ಲ. ಆದರೆ ಪೊಲೀಸ್ ಮೂಲಗಳು ಮಾತ್ರ ಇದು ಕೆವಿನ್ ಮೃತದೇಹ ಎಂದು ತಿಳಿಸಿದ್ದಾರೆ. ಕೆವಿನ್ ಒಬ್ಬ ಅನುಭವಿ ಮೀನುಗಾರನಾಗಿದ್ದು, ಅಲ್ಲದೆ ಕೇಪ್ ಯಾರ್ಕ್ ಸಮುದಾಯದ ಪ್ರಸಿದ್ಧ ಸದಸ್ಯರಾಗಿದ್ದರು. ಕೆವಿನ್ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡ ಪ್ರದೇಶದಿಂದ ಸುಮಾರು ೧.೫ ಮೈಲು ದೂರದಲ್ಲಿದ್ದ ೧೩.೪ ಅಡಿ ಹಾಗೂ ಸುಮಾರು ೧೦ ಅಡಿ ಉದ್ದದ ಎರಡು ಮೊಸಳೆಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಪೈಕಿ ಒಂದು ಮೊಸಳೆಯ ದೇಹದಲ್ಲಿ ಮಾತ್ರ ಮಾನವನ ಕಳೇಬರ ಪತ್ತೆಯಾಗಿದೆ. ಆದರೆ ವನ್ಯಜೀವಿ ಅಧಿಕಾರಿಗಳ ಪ್ರಕಾರ, ಎರಡೂ ಮೊಸಳೆಗಳು ಕೂಡ ಕೆವಿನ್ ಅವರನ್ನು ತಿಂದು ಹಾಕಿದ್ದವು ಎಂದು ಅಂದಾಜಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಉಷ್ಣವಲಯದ ಉತ್ತರದಲ್ಲಿ ಮೊಸಳೆಗಳು ಅತ್ಯಂತ ಸಾಮಾನ್ಯವಾಗಿದ್ದು, ಭಾರೀ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿವೆ. ಇದರ ಹೊರತಾಗಿಯೂ ಈ ರೀತಿ ದಾಳಿ ನಡೆಸುವುದು ಮಾತ್ರ ತೀರಾ ಅಪರೂಪದ ಸಂಗತಿಯಾಗಿದೆ. ೧೯೮೫ರಲ್ಲಿ ದಾಖಲಾತಿ ಆರಂಭವಾದಂದಿನಿಂದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಇಲ್ಲಿಯ ವರೆಗೆ ಕೇವಲ ೧೩ ಮಂದಿ ಮಾತ್ರ ಮೃತಪಟ್ಟಿದ್ದು, ಇದರಲ್ಲಿ ಕೆವಿನ್ ಪ್ರಕರಣ ಕೂಡ ಸೇರಿದೆ.